Wednesday, August 31, 2011

Shri Krishnana Nooraru Geethegalu - 152

ಶ್ರೀಆದಿಕೂರ್ಮ ನಿತ್ಯಧ್ಯಾನಮಂತ್ರ

ಮಂದಾರಧರಂ ದೇವಂ ಶ್ರೀವಿಷ್ಣು ದ್ವಿತೀಯಾವತಾರಂ
ಅಮೃತಂ ಸುರಗಣಪರಂ ಶ್ರೀಆದಿಕೂರ್ಮಂ ಉಪಾಸ್ಮಹೇ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೧.೦೮.೨೦೧೧

Tuesday, August 30, 2011

Shri Krishnana Nooraru Geethegalu - 151

ಕರ್ಮನೇಮಕ ಕೃಷ್ಣ

ಹರಿ ಅದ್ಭುತನೊ ಗೋಗಿರಿ ಎತ್ತಿದನೊ
ಇಂದ್ರಗರ್ವವನಿಳಿಸಿ ಕರ್ಮನೇಮಕ ಕೃಷ್ಣ

ಸೆರೆಯೊಳುದ್ಭವಿಸಿ ನಂದನೊಳು ನೆಲೆಸಿ
ಮಥುರಾಂಧನ ವಧಿಸಿ ಸುಜನರುದ್ಧರಿಸಿದಾ (೧)

ಕಾಲಿಯ ಹೆಡೆಮೆಟ್ಟಿ ದ್ವಾರಕೆಯನು ಕಟ್ಟಿ
ಪೂತನಾದಿ ದುರಿತರ ಯಮಪುರಿಗಟ್ಟಿದಾ (೨)

ಯದುಕುಲ ಶ್ರೀತಿಲಕ ಗೋಪಜನ ಮೈಪುಳಕ
ರಾಧೆಯ ಹೃದಯದ ಸರಿಗಮ ನುಡಿಸುವಾ (೩)

ಮೂಜಗ ಶ್ರೀಲೋಲ ಗೋವಿಂದ ಗೋಪಾಲ
ದಶರೂಪದಿ ಸಲಹೋ ಶ್ರೀನಿವಾಸ ವಿಠಲ (೪)

ಹರಿ ಅದ್ಭುತನೊ ಗೋಗಿರಿ ಎತ್ತಿದನೊ
ಇಂದ್ರಗರ್ವವನಿಳಿಸಿ ಕರ್ಮನೇಮಕ ಕೃಷ್ಣ

              ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೮.೨೦೧೧

Friday, August 26, 2011

Shri Krishnana Nooraru Geethegalu - 150

ಬಾರೋ ಯದುನಂದನ

ಬಾರೋ ಯದುನಂದನ ಬಾರೋ ಸುಂದರನಯನ
ಬಾರಯ್ಯ ಬಾ ಕೃಷ್ಣ ಇಂದಿರಾರಮಣ

ಬಾರೋ ದೇವಕಿಕಂದ ಬಾರೋ ಗೋಕುಲನಂದ
ಬಾರಯ್ಯ ಬಾ ಕೃಷ್ಣ ಬಾಲಮುಕುಂದ

ಬಾರೋ ಮೂಜಗಲೋಲ ಬಾರೋ ಗೋಪಾಲ
ಬಾರಯ್ಯ ಬಾ ಕೃಷ್ಣ ಸುಜನಪಾಲ

ಬಾರೋ ಸುಂದರದೇವ ಬಾರೋ ದೇವರದೇವ
ಬಾರಯ್ಯ ಬಾ ಕೃಷ್ಣ ವಾಸುದೇವ

ಬಾರೋ ಭಕ್ತಾಭರಣ ಬಾರೋ ವೇಂಕಟರಮಣ
ಬಾರಯ್ಯ ಬಾ ಕೃಷ್ಣ ನಾರಾಯಣ

ಬಾರೋ ಶ್ರೀರಾಮರೂಪ ಬಾರೋ ಶ್ರೀಪುಣ್ಯದೀಪ
ಬಾರಯ್ಯ ಬಾ ಕೃಷ್ಣ ಮಥುರಾಧಿಪ

ಬಾರೋ ಶ್ರೀಜಗಬೋಧ ಬಾರೋ ಶ್ರೀವೇದವೇದ
ಬಾರಯ್ಯ ಬಾ ಕೃಷ್ಣ ತೀರ್ಥಪಾದ

ಬಾರೋ ಶುಭಕಲ್ಯಾಣ ಬಾರೋ ದೀನರಪ್ರಾಣ
ಬಾರಯ್ಯ ಬಾ ಕೃಷ್ಣ ರಾಧೆರಮಣ

ಬಾರೋ ಮಲ್ಲರಮಲ್ಲ ಬಾರೋ ಶ್ರೀಪರಿಪಾಲ
ಬಾರಯ್ಯ ಬಾ ಕೃಷ್ಣ ಶ್ರೀನಿವಾಸ ವಿಠಲ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೦೮.೨೦೧೧

Saturday, August 20, 2011

Shri Krishnana Nooraru Geethegalu - 149

ವಾಗ್ನಿಧಿ

ಸಲಹೊ ವಾಗ್ನಿಧಿಯೆ ಕರುಣಿಯೆನ್ನಯ ದೊರೆಯೆ
ಶಾಪಾನುಗ್ರಹದೇವ ಶ್ರೀರಾಘವೇಂದ್ರ

ಹರಿವಾಯುವೊಲಿದವನೆ ಅಣುರೇಣ ಪೊರೆವವನೆ
ಅವನಿಯೊಳು ಶ್ರೀಹರಿಯ ಶೇಷ ಮಹನೀಯ
ಸಕಲಬಲ್ಲಿದ ಗುರುವೆ ಎನ್ನ ಮರೆವುದು ಸರಿಯೆ
ಮೊರೆಬಂದೆ ನಿನ್ನ ಪಾದ ಕಾಯೊ ಗುರುರಾಯ (೧)

ನಿನ್ನ ಕರುಣೆಯೆ ಗುರುವೆ ಕ್ಷಯಗೆ ಅಕ್ಷಯವು
ಅಂಧಕಗೆ ಹರಿಬೆಳಕು ಮೂಢನಾ ತಿಳಿವು
ಮಮತೆಮಾರುತ ನೀನೊ ಧರಣಿಮಡಿಲಿನ ತಣಿವು
ನರಜನುಮದುಲ್ಲಾಸ ಅನ್ನ ಉಳಿವು (೨)

ಕಲಿಯ ಕತ್ತಲೆಯೊಳಗೆ ಅರಿಯದೆ ನಿನ್ನಿರುವ
ಹಲವನ್ಯವೆಸಗಿಹೆನು ಕ್ಷಮಿಸೆನ್ನನು
ಕರೆತಂದ ಶ್ರೀಗುರುವೆ ಮರೆತೆನ್ನ ಮೋಸಗಳ
ಶ್ರೀನಿವಾಸ ವಿಠಲನ್ನ ತೋರಿಸಿನ್ನು (೩)

ಸಲಹೊ ವಾಗ್ನಿಧಿಯೆ ಕರುಣಿಯೆನ್ನಯ ದೊರೆಯೆ
ಶಾಪಾನುಗ್ರಹದೇವ ಶ್ರೀರಾಘವೇಂದ್ರ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೮.೨೦೧೧

Wednesday, August 17, 2011

Shri Krishnana Nooraru Geethegalu - 148

ಸುಜ್ಞಾನ ರಾಜ

ಮೂಲರಾಮ ಮೇಘಶ್ಯಾಮ ಮುಖ್ಯಪ್ರಾಣರೊಲಿದನೆ
ತುಂಗಾತೀರದಿ ನೆಲೆಸಿ ಸುಜನರ ಕಾವ ರಾಘವೇಂದ್ರನೆ

ಧರೆಯ ನರರ ಸಲಹೆ ಭುವನಗಿರಿಯೊಳುದಿತ ಸೂರ್ಯನೆ
ಜ್ಞಾನ ತೇಜನೆ ಸುಜ್ಞಾನ ರಾಜನೆ ವೃಂದಾವನದ ರಾಯನೆ (೧)

ಕಲಿಯ ಕರ್ಮವ ಕಳೆಯೆ ಮೋಕ್ಷವನೊಲ್ಲೆನೆಂದ ವಿಶೇಷನೆ
ಸತ್ಯಧರ್ಮದಾದಿ ಗುರುವೆ ಶಾಪಾನುಗ್ರಹ ಹರಿಶೇಷನೆ (೨)

ಭಜಿತ ಶರಣರ ಕಲ್ಪವೃಕ್ಷವೆ ನಮಿಸೆ ಕಾಮಧೇನುವೆ
ಶ್ರೀನಿವಾಸ ವಿಠಲನೊಲಿದನೆ ಪೊರೆಯೆಮ್ಮನು ಬೇಡುವೆ (೩)

ಮೂಲರಾಮ ಮೇಘಶ್ಯಾಮ ಮುಖ್ಯಪ್ರಾಣರೊಲಿದನೆ
ತುಂಗಾತೀರದಿ ನೆಲೆಸಿ ಸುಜನರ ಕಾವ ರಾಘವೇಂದ್ರನೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೮.೨೦೧೧

Saturday, August 13, 2011

Shri Krishnana Nooraru Geethegalu - 147

ಕಲಿಕರ್ಮಹಾರಿ

ಕೃಷ್ಣ ತ್ರಿಜಗ ಸಂಚಾರಿ ಶ್ರೀಹರಿ
ಶ್ರೀಕೃಷ್ಣ ತ್ರಿಜಗ ಸಂಚಾರಿ

ಜಲಮೂಲರೂಪ ಶ್ರೀಹರಿ ನರಕೇಸರಿ
ದಶದವತಾರಿ ಶ್ರೀದುರಿತ ಸಂಹಾರಿ (೧)

ವನಮಾಲಿ ಶ್ರೀವಸುದೇವಸುತ ಶೌರಿ
ಜಗದೋದ್ಧಾರ ಶ್ರೀಪಾಲ ಮುರಾರಿ (೨)

ವೈಕುಂಠವಾಸ ಶ್ರೀಗೋಗಿರಿಧಾರಿ
ಶ್ರೀನಿವಾಸ ವಿಠಲ ಶ್ರೀಕಲಿಕರ್ಮಹಾರಿ (೩)

ಕೃಷ್ಣ ತ್ರಿಜಗ ಸಂಚಾರಿ ಶ್ರೀಹರಿ
ಶ್ರೀಕೃಷ್ಣ ತ್ರಿಜಗ ಸಂಚಾರಿ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೩.೦೮.೨೦೧೧

Wednesday, August 10, 2011

Shri Krishnana Nooraru Geethegalu - 146

ಗೋಕುಲ ಗೋವಿಂದ

ಗೋಕುಲ ಗೋವಿಂದ ಬಲು ಚೆಂದ
ಬೃಂದಾವನ ಕಂದ ಮುಕುಂದ

ಸುಂದರ ನಯನ ಚಂದಿರ ವದನ
ನೊಸಲೊಳು ನಗುವ ಸುಮಧುರ ಚಂದನ
ಅಧರದಿಂ ಉದಯಿಸೊ ಆನಂದ ನಗುವನ
ಸಾಟಿಯೇ ಅವನಿಗೆ ಅವನೇ ಮೋಹನ (೧)

ಮುರಳೀ ಮಾಧವ ಮಥುರಾ ಕೇಶವ
ಎದೆಯೊಳು ಪ್ರೇಮದ ವೇಣುವ ನುಡಿಸುವ
ವಂದಿಗೆ ಕಾಲ್ಗೆಜ್ಜೆ ಘಲಿಘಲಿರೆನಿಸುತ
ಶ್ರೀನಿವಾಸ ವಿಠಲ ತಾ ಜಗವನೆ ಕುಣಿಸುವ (೨)

ಗೋಕುಲ ಗೋವಿಂದ ಬಲು ಚೆಂದ
ಬೃಂದಾವನ ಕಂದ ಮುಕುಂದ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೦೮.೨೦೧೧

Tuesday, August 9, 2011

Shri Krishnana Nooraru Geethegalu - 145

ಆದಿವರಾಹ ಧ್ಯಾನಮಂತ್ರ

ವಸುಧಾಹೃದಯಂ ದೇವಂ ಶ್ರೀವಿಷ್ಣು ತೃತೀಯಾವತಾರಂ
ಚತುರ್ಭುಜಂ ಹಿರಣ್ಯಾಕ್ಷಹರಂ ಆದಿವರಾಹಂ ಉಪಾಸ್ಮಹೇ

                                  ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೦೮.೨೦೧೧

Wednesday, August 3, 2011

Shri Krishnana Nooraru Geethegalu - 144

ಬರುವನೆ ಮಾಧವ

ಬರುವನೆ ಮಾಧವ ಹೇಳೆ ಸಖಿ ಇಂದು
ಬಾರನೇ ದುಗುಡವು ಕೇಳೆ ಸಖಿ

ಹಿಂದಿನ ಇರುಳು ತಡವಾಗಿ ಬಂದ
ಮನ್ನಿಸೆ ರಾಧೆ ಎನುತ ಗೋವಿಂದ
ಲೋಕಕಾರ್ಯವೆ ಅದಕೆ ಕಾರಣವೆನುತ
ಅಧರದೊಳಧರವ ಇರಿಸುತ ರಮಿಸುತ (೧)

ಬರುವವಸರದಿ ಮುರಳಿಯ ಮರೆತೆ
ನಾದವಾಲಿಸುವೆ ವೀಣೆಯ ನುಡಿಸೆಂದ
ಎನ್ನೆದೆ ವಿರಹದ ಬಯಕೆ ಬೃಂದಾವನದಿ
ಒಲವಿನ ಹೂಗಳ ಅರಳಿಸಿ ಅರವಿಂದ (೨)

ಮೂಜಗ ಮೋಹಿಸೊ ಮೋಹನನೆ ಅವನು
ಗೋಕುಲ ಪ್ರೀತಿಸೊ ಮದನನ ಪಿತನು
ಕರೆದೊಡೆ ಒಲುಮೆಯೊಳ್ ಓಡೋಡಿಬರುವ
ಎನ್ನಕ್ಕ ಲಕುಮಿಯ ಶ್ರೀನಿವಾಸ ವಿಠಲನು (೩)

ಬರುವನೆ ಮಾಧವ ಹೇಳೆ ಸಖಿ ಇಂದು
ಬಾರನೇ ದುಗುಡವು ಕೇಳೆ ಸಖಿ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೮.೨೦೧೧