Tuesday, December 25, 2012

Shri Krishnana Nooraru Geethegalu - 326

ಚರಣ ತೋರಿಸೊ

ಚರಣ ತೋರಿಸೊ ಶ್ರೀರಾಮನ ಚರಣ ತೋರಿಸೊ
ಚರಣ ತೋರಿಸೊ ಕರುಣ ನಿನ್ನ ಶ್ರೀಚರಣಕೆರಗುವೆ ನಾ

ನಿನ್ನ ದೊರೆ ಶ್ರೀರಘುಪತಿ ರಾಮನ ಮಾತೆ ಜಾನಕಿ ಪ್ರೇಮದ ಪ್ರಾಣನ
ಬಕುತಿಗೆ ಒಲಿದು ತಾನೆದೆಯೊಳು ನಿಂದನ ದಶರಥಸುತ ಶ್ರೀಪುರುಷೋತ್ತಮನ (೧)

ರಾಮರಾಮನ ಶ್ರೀರಾಮಚಂದ್ರನ ಮುನಿಜನವಂದಿತ ಕೌಸಲ್ಯೆ ಕಂದನ
ಸತ್ಯವಚನನ ಪುಣ್ಯಚರಿತನ ಲಂಕೆಯ ಕೇಡದ ಧರ್ಮದಿ ಮುರಿದನ (೨)

ರಾಮನ ಶ್ಯಾಮನ ದಶಮುಖದೇವನ ಆದಿಯಿಂ ಧರಣಿಯ ಸುಖದೊಳು ಕಾದನ
ಕಲಿಯೊಳು ನರನ ಅನ್ಯವ ಕಳೆದು ತಾ ಮುಕುತಿಯ ತೋರೊ ಶ್ರೀನಿವಾಸ ವಿಠಲನ (೩)

ಚರಣ ತೋರಿಸೊ ಶ್ರೀರಾಮನ ಚರಣ ತೋರಿಸೊ
ಚರಣ ತೋರಿಸೊ ಕರುಣ ನಿನ್ನ ಶ್ರೀಚರಣಕೆರಗುವೆ ನಾ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೫.೧೨.೨೦೧೨

Monday, December 24, 2012

Shri Krishnana Nooraru Geethegalu - 325

ಶ್ರೀಕೃಷ್ಣ

ಸರ್ವಾಕರ್ಷಕ ಸಕಲರ ಮೋಹಕ ಜಗದೋದ್ಧಾರಕ ಶ್ರೀಕೃಷ್ಣ
ಸಕಲೈಶ್ವರ್ಯ ಜಗದಾಶ್ಚರ್ಯ ಸಿರಿಸೌಂದರ್ಯ ಶ್ರೀಕೃಷ್ಣ

ಲೀಲಾದೇವನು ಮಾಯಾಜಾಲನು ರಾಧೆಲೋಲನು ಶ್ರೀಕೃಷ್ಣ
ನಂದನ ನಂದನು ದೇವಕಿಕಂದನು ಗೋಪಿ ಆನಂದನು ಶ್ರೀಕೃಷ್ಣ

ಸರ್ವದ ಶಕ್ತನು ಸಕಲದೊಳ್ಯುಕ್ತನು ಭವದ ವಿಮುಕ್ತನು ಶ್ರೀಕೃಷ್ಣ
ಸ್ವಾರ್ಥಕೆ ಶಾಪನು ನಿಸ್ವಾರ್ಥರೂಪನು ಸಮಪದದರ್ಥನು ಶ್ರೀಕೃಷ್ಣ

ಜ್ಞಾನವಿಜ್ಞಾನ ಪರಂಜ್ಯೋತಿ ಪಾವನ ಸತ್ಯ ಸಾಕ್ಷಿ ಚೇತನ ಶ್ರೀಕೃಷ್ಣ
ಪುಣ್ಯದ ದರ್ಶನ ಪಾಪ ವಿನಾಶನ ಅನಂತ ಕರುಣ ಶ್ರೀಕೃಷ್ಣ

ದೇವರದೇವನು ದೀನರ ಕಾವನು ಬಕುತಜೀವನು ಶ್ರೀಕೃಷ್ಣ
ತ್ರೇತೆಯ ರಾಮನು ದ್ವಾಪರ ಶ್ಯಾಮನು ಶ್ರೀನಿವಾಸ ವಿಠಲನು ಶ್ರೀಕೃಷ್ಣ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೧೨.೨೦೧೨

Friday, December 21, 2012

Shri Krishnana Nooraru Geethegalu - 324

ಶ್ರೀಹರಿನಾಮ

ಹರಿನಾಮಾಮೃತವಲ್ಲದೆ ಅನ್ಯವ ನುಡಿದೊಡೆ ಫಲವೇನು
ಹರಿಹರಿಯೆನ್ನದ ನರನಿಗೆ ಇಹದೊಳು ಮುಕುತಿ ದೊರೆವುದೇನು

ಶಬರಿಯು ನುಡಿಯಲು ದರುಶನವಾಯಿತೊ ನಾಮ ಶ್ರೀರಾಮ
ಶಿಲೆಯೊಳ ಶಾಪವ ಕಳೆದು ಕಾಪಾಡಿತೊ ಶ್ರೀರಾಮ ನಾಮ
ಮಾರುತಿರಾಯರ ಎದೆಯೊಳಗುಳಿಯಿತೊ ರಾಮ ಶ್ರೀರಾಮ
ದುರಿತವ ಕಳೆಯಿತೊ ಧರೆಯ ತಾನಾಳಿತೊ ಆ ದಿವ್ಯನಾಮ (೧)

ಮಾತೆ ಯಶೋದೆಯ ಮಡಿಲೊಳಗಾಡಿತೊ ಆ ಪುಣ್ಯನಾಮ
ರಾಧೆಗೆ ಸುಮಧುರ ಒಲುಮೆಯ ತೋರಿತೊ ಶ್ಯಾಮ ಆ ನಾಮ
ಕಂಸನ ಕಳೆದು ತಾನ್ಯದುವಂಶದಿ ಬೆಳಗಿತೊ ಕೃಷ್ಣನ ಶ್ರೀನಾಮ
ಕೊಳಲನು ಉಲಿಯುತಾ ಜಗವನೆ ಮಿಡಿಯಿತೊ ಆ ದಿವ್ಯನಾಮ (೨)

ಹರಿಯೆಂದಜಮಿಳನ ಬಿಡದೆ ತಾ ಸಲಹಿತೊ ನಾರಾಯಣ ನಾಮ
ನಾರಾಯಣನೆಂದ ಕಂದನ ಕಾಯ್ತೋ ಶ್ರೀಹರಿ ನಿಷ್ಕಾಮ
ಹನುಮನ ಭೀಮನ ಶ್ರೀಮಧ್ವರಾಯನ ಹರಸಿದ ಶ್ರೀನೇಮ
ಶ್ರೀನಿವಾಸ ವಿಠಲನ ಪೂಜಿಪ ನರರನು ಕಾಯುವ ಆ ನಾಮ (೩)

ಹರಿನಾಮಾಮೃತವಲ್ಲದೆ ಅನ್ಯವ ನುಡಿದೊಡೆ ಫಲವೇನು
ಹರಿಹರಿಯೆನ್ನದ ನರನಿಗೆ ಇಹದೊಳು ಮುಕುತಿ ದೊರೆವುದೇನು

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೨.೧೨.೨೦೧೨

Monday, December 17, 2012

Shri Krishnana Nooraru Geethegalu - 323

ಬಾರೊ ಮೋಹನ

ಮೋಹನ ಎನ್ನ ಮೋಹನ ಬೇಸರವು ಬೃಂದಾವನ
ಒಲುಮೆ ಮುರಳಿಯ ಉಲಿದು ಬಾರೊ ತೆರೆವೆ ಎದೆಯ ಕದವ ನಾ

ಮೋಹನ ಮನಮೋಹನ ಚಡಪಡಿಸಿದೆ ಈ ಮನ
ವಿರಹವೆನ್ನೊಳು ಮೊರೆದು ಕೇಳಿದೆ ನಿನ್ನ ಮಾಧವ ಬರುವನಾ

ಮೋಹನ ಎನ್ನ ಮೋಹನ ನೀನೀ ಹೃದಯ ಗಾಯನ
ಚಂದ್ರನಿರದ ಬರಿ ಬಾನದು ಸೊಗಸೆ ಹೇಳೊ ಪಾವನ

ಮೋಹನ ಮನಮೋಹನ ರಾಧೆ ಜೀವ ಜೀವನ
ಶ್ರೀನಿವಾಸ ವಿಠಲ ಬಾರೊ ಯುಮುನೆತೀರದೆ ಕಾಯ್ವೆ ನಾ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೧೨.೨೦೧೨

Friday, December 14, 2012

Shri Krishnana Nooraru Geethegalu - 322

ಮೀರೆಯ ಮರೆತೆಯಾ

ಬಾರೆಯಾ ದಯೆ ತೋರೆಯಾ
ಗೋಪಪ್ರಿಯ ಶ್ರೀಗೋಪಾಲಕೃಷ್ಣನೆ
ಈ ಮೀರೆಯ ಮರೆತೆಯಾ

ನಾನು ಎನುವ ಗಂಡನ ಬಿಟ್ಟು
ಆರು ಮನೆಯ ಮೋಹವ ಬಿಟ್ಟು
ಕಾಯುತಿಹೆನೊ ಮಾರಪಿತನೆ
ಎನ್ನ ಜೀವವ ನಿನ್ನೊಳಿಟ್ಟು (೧)

ನಿನ್ನ ಇರುವಿನೊಳೆನ್ನ ಇರುವು
ನಿನ್ನ ಸನಿಹದೆ ಮೀರೆ ಜಗವು
ನೀನೇ ಎನ್ನೊಳ ಪ್ರೀತಿಧಾರೆ
ಶ್ರೀನಿವಾಸ ವಿಠಲ ದೊರೆಯೆ (೨)

ಬಾರೆಯಾ ದಯೆ ತೋರೆಯಾ
ಗೋಪಪ್ರಿಯ ಶ್ರೀಗೋಪಾಲಕೃಷ್ಣನೆ
ಈ ಮೀರೆಯ ಮರೆತೆಯಾ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೧೨.೨೦೧೨

Tuesday, December 11, 2012

Shri Krishnana Nooraru Geethegalu - 321

ರಾಮ ನಿನ್ನ ನಾಮವಲ್ಲದೆ

ರಾಮ ನಿನ್ನ ನಾಮವಲ್ಲದೆ ಅನ್ಯವ ನಾ ಅರಿಯೆನೊ
ಚರಣಮುಕುತಿ ದೊರೆವವರೆಗೆ ನಾಮಸ್ಮರಣೆ ಮರೆಯೆನೊ

ಶಬರಿ ನುಡಿದ ದಿವ್ಯನಾಮ ಹನುಮಗೊಲಿದ ಪುಣ್ಯನಾಮ
ಮುನಿಸತಿಯ ಶಾಪವಳಿದ ಶುಭದ ನಾಮ ರಾಮ (೧)

ಭವವ ಕಳೆಯೊ ಬುವಿಯ ನಾಮ ಬಕುತಗೊಲಿಯೊ ಭವ್ಯಧಾಮ
ರಕ್ಕಸೇಂದ್ರನ ಕೆಡುಕ ಕಡಿದ ಶಕುತ ನಾಮ ರಾಮ (೨)

ತ್ರೇತೆಯೊಳಗೆ ಸುಕೃತ ನಾಮ ದ್ವಾಪರದೆ ಸುಜನ ಕ್ಷೇಮ
ಕಲಿಯ ಪೊರೆವ ಶ್ರೀನಿವಾಸ ವಿಠಲ ರಾಮ ಶ್ಯಾಮ ರಾಮ (೩)

ರಾಮ ನಿನ್ನ ನಾಮವಲ್ಲದೆ ಅನ್ಯವ ನಾ ಅರಿಯೆನೊ
ಚರಣಮುಕುತಿ ದೊರೆವವರೆಗೆ ನಾಮಸ್ಮರಣೆ ಮರೆಯೆನೊ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೨.೧೨.೨೦೧೨

Monday, December 10, 2012

Shri Krishnana Nooraru Geethegalu - 320

ಭಗವಂತ

ಭಗವಂತ ನೀ ಕರುಣದನಂತ
ಸಲಹೊ ಶ್ರೀಪತಿ ಲಕುಮಿಕಾಂತ

ನಿನ್ನನೇ ನಂಬಿಹೆ ನಂಬಿ ನಾ ಬಂದಿಹೆ
ನೀನೇ ಸತ್ಯವು ದೇವ ಸಾಕ್ಷಿ ಚೇತನವು
ನಮಿಪೆನೊ ಜಗಮೂಲ ಕಾಯೆನ್ನ ಕುಶಲವ
ಸುಗುಣದನಂತನೆ ಸಂಪನ್ನ ಕೃಷ್ಣ (೧)

ಪರಮಪಾವನ ನೀನು ಪರಾಮರ್ಶಿಸೊ ಎನ್ನ
ಅನ್ಯಗಳೆಲ್ಲವ ಪಿತನಂದದಿ
ಪಾಪನಾಶನ ನೀನು ಶ್ರೀನಿವಾಸ ವಿಠಲಯ್ಯ
ಕ್ಷಮಿಸೆನ್ನ ನಿನ್ನ ಸುತನಂದದಿ (೨)

ಭಗವಂತ ನೀ ಕರುಣದನಂತ
ಸಲಹೊ ಶ್ರೀಪತಿ ಲಕುಮಿಕಾಂತ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೧೨.೨೦೧೨

Sri Krishnana Nooraru Geethegalu - 319

ಮೀರೆಯ ಮೊರೆಯ

ಮೀರೆಯ ಮೊರೆಯ ಕೇಳೆನ್ನ ದೊರೆಯೆ
ಗೋಕುಲ ಚೆಲುವನೆ  ಮುದ್ದುಕೃಷ್ಣಯ್ಯ

ರವಿ ಬರುವನೊ ತಾ ಮೂಡಣದೊಳಗೆ
ಸಾಸಿರ ಕಿರಣದಿ ನಿನ್ನನು ಮುಗಿಯೆ
ನದಿ ತಾ ಹರಿವುದೊ ಶ್ರೀಚರಣವ ತೊಳೆಯೆ
ಮೊಗ್ಗದು ಅರಳಿ ಹೂ ನಿನ್ನ ಮಾಲೆಯಾಗೆ (೧)

ನಿನ್ನೆದೆಯೊಲುಮೆಯ ಕೊಡೊ ಶ್ರೀಪ್ರಭುವೆ
ಜನುಮಜನುಮಕು ನಾ ನಿನ್ನವಳಾಗುವೆ
ನಿನ್ನಲ್ಲದನ್ಯವೂ ತೃಣವೆನಗೆ ಕೃಷ್ಣಯ್ಯ
ಶ್ರೀನಿವಾಸ ವಿಠಲನೆ ಸೇರೆನ್ನ ಬೇಡುವೆ (೨)

ಮೀರೆಯ ಮೊರೆಯ ಕೇಳೆನ್ನ ದೊರೆಯೆ
ಗೋಕುಲ ಚೆಲುವನೆ  ಮುದ್ದುಕೃಷ್ಣಯ್ಯ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೧೨.೨೦೧೨

Tuesday, December 4, 2012

Shri Krishnana Nooraru Geethegalu - 318

 ಹರಿಭಜನೆ

ಜಾನಕಿ ವಲ್ಲಭ ಜಯತು ಶ್ರೀರಾಮ
ಬಕುತ ಸುಲಭ ಶ್ರೀಕಲ್ಯಾಣಧಾಮ
ಜಯಜಯ ರಾಮ ಜಗದೀಶ ರಾಮ
ದಶರಥಸುತ ವಂದೆ ರಘುಕುಲಸೋಮ

ರಾಧಾಹೃದಯ ಶ್ರೀನೀಲಮೇಘಶ್ಯಾಮ
ಕೃಷ್ಣನ ಜಗದೊಳು ಸಿರಿ ಸುಖ ಕ್ಷೇಮ
ಜಯಜಯ ರಾಮ ದ್ವಾರಕೆ ಶ್ಯಾಮ
ನವನೀತಚೋರನೆ ದೇವಕಿ ಪ್ರೇಮ (೧)

ಹನುಮಯ್ಯಗೊಲಿದನೆ ತ್ರೇತಾ ರಾಮ
ಭೀಮಯ್ಯನಭಯನೆ ಗೋಕುಲ ಶ್ಯಾಮ
ರಾಯರಾಯರಿಗೊಲಿದ ಶ್ರೀನಿವಾಸ ವಿಠಲನೆ
ಸುಖದೊಳು ಸಲಹೊ ನಾನು ಸುಧಾಮ (೨)

ಜಾನಕಿ ವಲ್ಲಭ ಜಯತು ಶ್ರೀರಾಮ
ಬಕುತ ಸುಲಭ ಶ್ರೀಕಲ್ಯಾಣಧಾಮ
ಜಯಜಯ ರಾಮ ಜಗದೀಶ ರಾಮ
ದಶರಥಸುತ ವಂದೆ ರಘುಕುಲಸೋಮ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೫.೧೨.೨೦೧೨

Saturday, December 1, 2012

Shri Krishnana Nooraru Geethegalu - 317

ಹರಿಯೆನುವನೆ ಕನಕ

ಹರಿಯೆನುವನೆ ಕನಕ ಶ್ರೀಹರಿಯೆನಲವ ಧನಿಕ
ಹರಿಹರಿಯೆನುವಗೆ ಹರಿ ತೋರುವ ಬೆಳಕ

ತೊಗಲದ ತೊಳೆವೊಡೆ ತೊನ್ನು ಕಳೆವುದೆ ಜೀವ
ಜನುಮಜನುಮದ ಕರುಮ ಹರಿಲೆಕ್ಕ
ತೊಗಲದು ಕ್ಷಣ ಕಾಣೊ ಮತ್ತೊಳಗದು ಅನುಕ್ಷಣವು
ನಿನ್ನಾತ್ಮಕೆ ಮಾಡಿಸೊ ಹರಿಜಳಕ (೧)

ನರಹೀನ ನಾಲಗೆ ಬಿಗಿಹಿಡಿ ಕಲಿಯೊಳು
ನರಕದೊಳನ್ಯಕೆ ಇಲ್ಲವೋ ಮರುಕ
ಬಿಡದೆ ಸ್ಮರಿಸಲು ಎಮ್ಮ ಶ್ರೀನಿವಾಸ ವಿಠಲ
ನಿತ್ಯದಿ ದೊರೆವುದು ಶ್ರೀಪಾದ ಪುಳಕ (೨)

ಹರಿಯೆನುವನೆ ಕನಕ ಶ್ರೀಹರಿಯೆನಲವ ಧನಿಕ
ಹರಿಹರಿಯೆನುವಗೆ ಹರಿ ತೋರುವ ಬೆಳಕ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೧೨.೨೦೧೨