Friday, December 21, 2012

Shri Krishnana Nooraru Geethegalu - 324

ಶ್ರೀಹರಿನಾಮ

ಹರಿನಾಮಾಮೃತವಲ್ಲದೆ ಅನ್ಯವ ನುಡಿದೊಡೆ ಫಲವೇನು
ಹರಿಹರಿಯೆನ್ನದ ನರನಿಗೆ ಇಹದೊಳು ಮುಕುತಿ ದೊರೆವುದೇನು

ಶಬರಿಯು ನುಡಿಯಲು ದರುಶನವಾಯಿತೊ ನಾಮ ಶ್ರೀರಾಮ
ಶಿಲೆಯೊಳ ಶಾಪವ ಕಳೆದು ಕಾಪಾಡಿತೊ ಶ್ರೀರಾಮ ನಾಮ
ಮಾರುತಿರಾಯರ ಎದೆಯೊಳಗುಳಿಯಿತೊ ರಾಮ ಶ್ರೀರಾಮ
ದುರಿತವ ಕಳೆಯಿತೊ ಧರೆಯ ತಾನಾಳಿತೊ ಆ ದಿವ್ಯನಾಮ (೧)

ಮಾತೆ ಯಶೋದೆಯ ಮಡಿಲೊಳಗಾಡಿತೊ ಆ ಪುಣ್ಯನಾಮ
ರಾಧೆಗೆ ಸುಮಧುರ ಒಲುಮೆಯ ತೋರಿತೊ ಶ್ಯಾಮ ಆ ನಾಮ
ಕಂಸನ ಕಳೆದು ತಾನ್ಯದುವಂಶದಿ ಬೆಳಗಿತೊ ಕೃಷ್ಣನ ಶ್ರೀನಾಮ
ಕೊಳಲನು ಉಲಿಯುತಾ ಜಗವನೆ ಮಿಡಿಯಿತೊ ಆ ದಿವ್ಯನಾಮ (೨)

ಹರಿಯೆಂದಜಮಿಳನ ಬಿಡದೆ ತಾ ಸಲಹಿತೊ ನಾರಾಯಣ ನಾಮ
ನಾರಾಯಣನೆಂದ ಕಂದನ ಕಾಯ್ತೋ ಶ್ರೀಹರಿ ನಿಷ್ಕಾಮ
ಹನುಮನ ಭೀಮನ ಶ್ರೀಮಧ್ವರಾಯನ ಹರಸಿದ ಶ್ರೀನೇಮ
ಶ್ರೀನಿವಾಸ ವಿಠಲನ ಪೂಜಿಪ ನರರನು ಕಾಯುವ ಆ ನಾಮ (೩)

ಹರಿನಾಮಾಮೃತವಲ್ಲದೆ ಅನ್ಯವ ನುಡಿದೊಡೆ ಫಲವೇನು
ಹರಿಹರಿಯೆನ್ನದ ನರನಿಗೆ ಇಹದೊಳು ಮುಕುತಿ ದೊರೆವುದೇನು

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೨.೧೨.೨೦೧೨

1 comment:

  1. ದಿವ್ಯ ನಾಮದ ಒಳ್ಳೆಯ ಸ್ಮರಣೆ.

    ReplyDelete