Sunday, July 31, 2011

Shri Krishnana Nooraru Geethegalu - 143

ಪಾದ ಕರುಣ

ಕರೆ ಕೇಳದೇ ಕೃಷ್ಣ ಈ ದೀನ ಪಾಮರನ
ಮೊರೆಬಂದೆ ಪಾಲಿಸೈ ಪದುಮನಾಭ

ಶಿಲೆಯಾದಹಲ್ಯೆಯ ಸಕಲ ಶಾಪವನಳಿದು
ಸಲಹಿದನೆ ಕಾಯೆನ್ನ ಕರುಣಾಕರ
ಶಬರಿ ಸಹನೆಯೊಳು ಶ್ರೀರಾಮ ಬಾರೆನಲು
ಕರುಣಿಸಿ ಕಂಡವನೆ ದಯಾಸಾಗರ (೧)

ಕರಿಯದುವು ಹರಿಯೆನಲು ಅಗ್ನಿಸುರಳಿಯೊಳ
ರಳಿ ನೋವನೀಗಿದ ಪ್ರಭುವೆ ದೇವದೇವ
ಕಂದನವ ತಂದೆ ನೀ ಕಾಯೆಂದು ಮೊರೆಯಿಡಲು
ಕಂಭವನೆ ಸೀಳಿದನೆ ವಾಸುದೇವ (೨)

ಕಲಿಯ ಕತ್ತಲೆಯೊಳಗೆ ಹಾದಿಕಾಣೆನೊ ಹರಿಯೆ
ಗತಿಯಾಗೊ ಸುಜನಂಗೆ ನಾರಾಯಣ
ಮೇಲುಕೋಟೆಯ ಚೆಲುವ ಶ್ರೀನಿವಾಸ ವಿಠಲಯ್ಯ
ಎನಗಿರಲೊ ನಿನ್ನ ಪಾದಕರುಣ (೩)

ಕರೆ ಕೇಳದೇ ಕೃಷ್ಣ ಈ ದೀನ ಪಾಮರನ
ಮೊರೆಬಂದೆ ಪಾಲಿಸೈ ಪದುಮನಾಭ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೧.೦೭.೨೦೧೧

Friday, July 29, 2011

Shri Krishnana Nooraru Geethegalu - 142

ರಾಯ ಗುರುರಾಯ

ರಾಯ ಗುರುರಾಯ ರಾಘವೇಂದ್ರ ಮಹನೀಯ
ಜ್ಞಾನ ಸುಜ್ಞಾನ ವಿಜ್ಞಾನ ನಿಧಯೆ

ಭವದುಃಖಶಮನಾಯ ಸುಖಧೈರ್ಯವರದಾಯ
ಸಂಶಯಾಪಸ್ಮೃತಿಭ್ರಾಂತಿನಾಶಕಾಯ
ಶ್ರೀಮಹಾಮಹಿಮಾಯ ಮಧ್ವಮತಸೋಮಾಯ
ರಾಮಮಾನಸ ಶ್ರೀಪುಣ್ಯವರ್ಧನಾಯ (೧)

ಪ್ರಹ್ಲಾದಪ್ರತಿರೂಪ ಭುವನಗಿರಿ ಪುಣ್ಯದೀಪ
ಸಕಲಸಿರಿ ಸುಪುತ್ರ ಸುಪ್ರದಾಯ
ಸುರಗಣಾಧೀಶಾಯ ಅಣುರೇಣುಕ್ಷೇಮಾಯ
ಶ್ರೀನಿವಾಸ ವಿಠಲ ವರದರಾಯ (೨)

ರಾಯ ಗುರುರಾಯ ರಾಘವೇಂದ್ರ ಮಹನೀಯ
ಜ್ಞಾನ ಸುಜ್ಞಾನ ವಿಜ್ಞಾನ ನಿಧಯೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೦೭.೨೦೧೧

Thursday, July 28, 2011

Shri Krishnana Nooraru Geethegalu - 141

ಪಾಲಿಸೈ ಪರಮಾತ್ಮ

ಪಾತಕದ ಪಾತಳಿಯೊಳ್ ಮುಳುಗಿಹೆನೊ ಮುರಹರನೆ
ಪಾಪವೆನ್ನವನಳಿದು ಪಾಲಿಸೈ ಕೃಷ್ಣ

ನೇತ್ರವೆನ್ನವು ನಿನ್ನ ನೋಡದ ಪಾತಕವ
ಕರ್ಣವೆನ್ನವು ನಿನ್ನ ಕೇಳದ ಪಾತಕವ
ನಾಲಗೆಯೆನ್ನದು ನಿನ್ನ ನುಡಿಯದ ಪಾತಕವ
ಹೃದಯವೆನ್ನದು ನಿನಗೆ ಮಿಡಿಯದ ಪಾತಕವ (೧)

ಎನ್ನ ಪಂಚಾಂಗಗಳ ಚಂಚಲದ ಪಾತಕವ
ಎನ್ನಾರು ಅಸುರರ ಸಂಚಿನೊಳ ಪಾತಕವ
ಸಕಲದೊಳು ಹರಿಯಿರುವ ಅರಿಯದಾ ಪಾತಕವ
ಶ್ರೀನಿವಾಸ ವಿಠಲ ನಿನ್ನ ಧ್ಯಾನಿಸದ ಪಾತಕವ (೨)

ಪಾತಕದ ಪಾತಳಿಯೊಳ್ ಮುಳುಗಿಹೆನೊ ಮುರಹರನೆ
ಪಾಪವೆನ್ನವನಳಿದು ಪಾಲಿಸೈ ಕೃಷ್ಣ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೭.೨೦೧೧

Sunday, July 24, 2011

Shri Krishnana Nooraru Geethegalu - 140

ಕೃಷ್ಣ ಶ್ರೀಶೌರಿ

ಶ್ರೀಹರಿ ಮುರಾರಿ ಜಗದೋದ್ಧಾರಿ
ಗೋವರ್ಧನಧಾರಿ ಶ್ರೀಶೌರೀಂ

ಆದಿದೇವ ಆನಂದಸಾಗರ
ಅಚಲಾದ್ಭುತ ಹರಿ ವಿಸ್ತಾರಂ
ಅಕ್ಷಯಾನಂತ ಅಜೇಯಾಚ್ಯುತ ಹರಿ
ಅಪರಾಜಿತ ಅವ್ಯಕ್ತಂ (೧)

ಕಮಲನಯನ ಕುಂಡಲಧರಿತ
ಕಂಸಾಂತಕ ಶ್ರೀಕೃಷ್ಣಂ
ಮುರಳೀಮೋಹನ ಮದನಮಾಧವ
ಮಹಾಮಹಿಮ ಶ್ರೀವಿಷ್ಣುಂ (೨)

ದೀನರಕ್ಷಕ ಶ್ರೀದಯಾನಿಧೆ
ದೇವಕಿನಂದನ ಧರಣೀಶಂ
ದೇವಾದಿದೇವ ಧರ್ಮರಕ್ಷಕಂ
ದ್ವಾರಕಾಪತೆ ಅವನೀಶಂ (೩)

ಪ್ರಜಾಪತಿ ಶ್ರೀಪಾರ್ಥಸಾರಥೆ
ಪುರುಷೋತ್ತಮ ಶ್ರೀಲೋಲಂ
ವೈಕುಂಠಪತೆಯೆ ಶ್ರೀನಿವಾಸ ವಿಠಲಂ
ವಂದೇ ಕಲಿಯುಗ ಶ್ರೀವರದಂ (೪)

ಶ್ರೀಹರಿ ಮುರಾರಿ ಜಗದೋದ್ಧಾರಿ
ಗೋವರ್ಧನಧಾರಿ ಶ್ರೀಶೌರೀಂ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೦೭.೨೦೧೧

Friday, July 22, 2011

Shri Krishnana Nooraru Geethegalu - 139

ನಾರಾಯಣಂ ವಂದೇ

ನಾರಾಯಣಂ ವಂದೇ ಶ್ರೀಮೂಲರಾಮಂ
ರಘುವಂಶತಿಲಕ ಶ್ರೀ ತ್ರಿಜಗಕ್ಷೇಮಂ

ನಾರಾಯಣಂ ವಂದೇ ಶ್ರೀವಾಸುದೇವಂ
ದ್ವಾರಕಾನಿಲಯ ಶ್ರೀ ಧರಣೀಶ್ವರಂ

ನಾರಾಯಣಂ ವಂದೇ ಶ್ರೀವಿಷ್ಣುರೂಪಂ
ಶ್ರೀನಿವಾಸ ವಿಠಲ ಶ್ರೀ ಸುಜನದೀಪಂ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೨.೦೭.೨೦೧೧

Wednesday, July 20, 2011

Shri Krishnana Nooraru Geethegalu - 138


ವೇಂಕಟನ ರಾಣಿ


ವಂದೇ ಜನನಿ ಶುಭಕಲ್ಯಾಣಿ
ಮಂಗಳೆ ಪಾವನಿ ವೇಂಕಟನ ರಾಣಿ

ಕ್ಷೀರಸಾಗರತನಯೆ ಕ್ಷಿಪ್ರಪ್ರದಾಯನಿ
ಚಂದ ಚಂದಿರವದನೆ ಚಂದ್ರಸಹೋದರಿ
ಅಷ್ಟದಶಾಂಭುಜೆ ಐಶ್ವರ್ಯದಾಯಿನಿ
ಮುತೈದೆ ಮಹಾಲಕ್ಷ್ಮಿ ವೈಕುಂಠವಾಸಿನಿ (೧)

ಪದ್ಮಪುಷ್ಪಸ್ಥಿತೆ ಪದ್ಮಾಸ್ತೆ ದೇವಿ
ಪುಣ್ಯವರ್ಷಿಣಿಯೆ ಪ್ರಕೃತೆ ಭಾರ್ಗವಿ
ಪದುಮನಯನೆ ತಾಯಿ ಪದುಮನಾಭನ ಪ್ರೇಮಿ
ಪರಮಪವಿತ್ರೆಯೆ ಶ್ರೀಪುರಂದರಿ (೨)

ಲೋಕಮಾತೆಯೆ ಲಕುಮಿ ಶ್ರೀಹರಿವಲ್ಲಭೆ
ಅಷ್ಟಮುಖೆ ಶುಭೆ ಜಯಮಂಗಳೆ ಪ್ರಭೆ
ಶ್ರೀನಿವಾಸ ವಿಠಲನ ನಿತ್ಯಸೇವಿತೆ ಲಕುಮಿ
ಕರುಣಿಸಿ ಕಾಯೆಮ್ಮ ಮೂಜಗಕ್ಷೇಮಿ (೩)

ವಂದೇ ಜನನಿ ಶುಭಕಲ್ಯಾಣಿ
ಮಂಗಳೆ ಪಾವನಿ ವೇಂಕಟನ ರಾಣಿ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೦೭.೨೦೧೧

Sunday, July 17, 2011

Shri Krishnana Nooraru Geethegalu - 137

ವೇಣು ವಿಹಾರಿ

ಗೋಕುಲ ಗೋಪಾಲ ಶ್ರೀಲೋಲ
ಸುರಗಣ ವಂದಿತ ಮೂಜಗಪಾಲ

ಮದನ ಮೋಹನ ವೇಣು ವಿಹಾರಿ
ವಿರಹಿ ರಾಧಾ ಪ್ರೇಮ ತಿಜೋರಿ (೧)

ಶ್ರೀಕರ ಶುಭಕರ ಸುಖನಿಧಿ ಶ್ರೀಹರಿ
ಸುಜನ ಸುಪಾಲ ದುರಿತಸಂಹಾರಿ (೨)

ಆದಿ ಅನಾದಿ ಶ್ರೀ ಅನಂತ ಅವತಾರಿ
ಶ್ರೀನಿವಾಸ ವಿಠಲ ವೈಕುಂಠದಾರಿ (೩)

ಗೋಕುಲ ಗೋಪಾಲ ಶ್ರೀಲೋಲ
ಸುರಗಣ ವಂದಿತ ಮೂಜಗಪಾಲ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೭.೨೦೧೧

Friday, July 15, 2011

Shri Krishnana Nooraru Geethegalu - 136

ಗೋವಿಂದರಾಯ

ಕಾಯುವುದೊ ಕೃಷ್ಣಯ್ಯ ಯಶೋದೆ ಪ್ರಿಯಸುತನೆ
ದ್ವಾಪರದ ಗೋಕುಲನೆ ಗೋವಿಂದರಾಯ

ಸೃಷ್ಟಿಯೊಳು ಸುಜನಂಗೆ ಸರ್ವಮಂಗಳ ನೀನೊ
ದುರಿತಸಂಹಾರಿ ಶ್ರೀದೇವದೇವ
ಅರಿಯದೆ ಹರಿಯೆಂದ ಅಜಮಿಳನ ಹರಸಿದನೆ
ಕಾಯುವುದು ಕಡೆವರೆಗು ಈ ಮೂಢನ (೧)

ಹೊನ್ನುಮಣ್ಣಿನ ದಾಹ ಮಡದಿಮಕ್ಕಳ ಮೋಹ
ಒಳಗಿರಿಸಿದವ ನೀನೊ ನಾನು ಬೊಂಬೆ
ಕಳೆದೆಲ್ಲ ಜಂಜಡವ ಕರುಣಿಸೊ ಶ್ರೀಪದವ
ಶ್ರೀನಿವಾಸ ವಿಠಲ ನೀ ಎನ್ನ ತಂದೆ (೨)

ಕಾಯುವುದೊ ಕೃಷ್ಣಯ್ಯ ಯಶೋದೆ ಪ್ರಿಯಸುತನೆ
ದ್ವಾಪರದ ಗೋಕುಲನೆ ಗೋವಿಂದರಾಯ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೦೭.೨೦೧೧

Wednesday, July 13, 2011

Shri Krishnana Nooraru Geethegalu - 135

ಶ್ರೀಕೃಷ್ಣ ಹರೆ

ಕೃಷ್ಣ ಹರೆ ಶ್ರೀಕೃಷ್ಣ ಹರೆ
ಕೃಷ್ಣ ಹರೆ ಶ್ರೀಕೃಷ್ಣ ಹರೆ

ಶ್ರೀ ಆದಿದೇವಂ ಕೃಷ್ಣ ಹರೆ
ಮೂಜಗಕಾವಂ ಕೃಷ್ಣ ಹರೆ
ಅಣುರೇಣುಪಾಲಂ ಕೃಷ್ಣ ಹರೆ
ಶ್ರೀಮೂಲರಾಮಂ ಕೃಷ್ಣ ಹರೆ

ಯದುಕುಲತಿಲಕಂ ಕೃಷ್ಣ ಹರೆ
ದ್ವಾಪರ ಪುಳಕಂ ಕೃಷ್ಣ ಹರೆ
ವಸುದೇವಕಂದಂ ಕೃಷ್ಣ ಹರೆ
ದೇವಕೀನಂದನಂ ಕೃಷ್ಣ ಹರೆ

ಚಂದನ ತಿಲಕಂ ಕೃಷ್ಣ ಹರೆ
ಚಂದಿರ ವದನಂ ಕೃಷ್ಣ ಹರೆ
ಕುಂಡಲ ಧರಿತಂ ಕೃಷ್ಣ ಹರೆ
ಮೂಜಗಸ್ಮರಿತಂ ಕೃಷ್ಣ ಹರೆ

ಮಥುರಾ ಜನಿಪಂ ಕೃಷ್ಣ ಹರೆ
ಗೋಕುಲ ನೆಲಿಪಂ ಕೃಷ್ಣ ಹರೆ
ಗೋಪಿ ಕಿಶೋರಂ ಕೃಷ್ಣ ಹರೆ
ನವನೀತಚೋರಂ ಕೃಷ್ಣ ಹರೆ

ಮುರಳೀಮೋಹನಂ ಕೃಷ್ಣ ಹರೆ
ಮನಸಮ್ಮೋಹನಂ ಕೃಷ್ಣ ಹರೆ
ಮದನಮಾಧವಂ ಕೃಷ್ಣ ಹರೆ
ಮಧುಸೂದನಂ ಕೃಷ್ಣ ಹರೆ

ಶ್ಯಾಮಲವರ್ಣಂ ಕೃಷ್ಣ ಹರೆ
ಕೋಮಲಾಂಗಂ ಕೃಷ್ಣ ಹರೆ
ಕೇಯೂರಧರಿತಂ ಕೃಷ್ಣ ಹರೆ
ಕೇಶವ ದೇವಂ ಕೃಷ್ಣ ಹರೆ

ವನಮಾಲಾಧರಂ ಕೃಷ್ಣ ಹರೆ
ಕೌಸ್ತುಭಧರಂ ಕೃಷ್ಣ ಹರೆ
ಶಂಖಚಕ್ರಾಧರಂ ಕೃಷ್ಣ ಹರೆ
ಗದಾಧರಂ ಶ್ರೀಕೃಷ್ಣ ಹರೆ

ರಾಧಾ ರಮಣಂ ಕೃಷ್ಣ ಹರೆ
ಭಾಮಾ ಪ್ರಣಯಂ ಕೃಷ್ಣ ಹರೆ
ರುಕ್ಮಿಣಿ ಹೃದಯಂ ಕೃಷ್ಣ ಹರೆ
ಮೀರಾ ಮಾನಸಂ ಕೃಷ್ಣ ಹರೆ

ಕಮಲನಯನಂ ಕೃಷ್ಣ ಹರೆ
ಕಮಲನಾಥಂ ಕೃಷ್ಣ ಹರೆ
ಕಂಜಲೋಚನಂ ಕೃಷ್ಣ ಹರೆ
ಕಂಸಾಂತಂಕಂ ಕೃಷ್ಣ ಹರೆ

ದ್ವಾರಕಾಧೀಶಂ ಕೃಷ್ಣ ಹರೆ
ಧರಣಿ ಮಹೇಶಂ ಕೃಷ್ಣ ಹರೆ
ದುರಿತಸಂಹಾರಂ ಕೃಷ್ಣ ಹರೆ
ದೇವಾದಿದೇವಂ ಕೃಷ್ಣ ಹರೆ

ಜಯಜನಾರ್ದನಂ ಕೃಷ್ಣ ಹರೆ
ಜಯಜಗದೀಶ್ವರಂ ಕೃಷ್ಣ ಹರೆ
ಜ್ಯೋತಿರಾದಿತ್ಯಂ ಕೃಷ್ಣ ಹರೆ
ಜಗದೋದ್ಧಾರಂ ಕೃಷ್ಣ ಹರೆ

ಪರಮಪುರುಷಂ ಕೃಷ್ಣ ಹರೆ
ಪುಣ್ಯಹಸ್ತಂ ಕೃಷ್ಣ ಹರೆ
ಪರಬ್ರಹ್ಮಂ ಕೃಷ್ಣ ಹರೆ
ಪರಮಾತ್ಮಂ ಕೃಷ್ಣ ಹರೆ

ಪಕ್ಷಿವಾಹನಂ ಕೃಷ್ಣ ಹರೆ
ಪಾರ್ಥಸಾರಥೀಂ ಕೃಷ್ಣ ಹರೆ
ಪುರುಷೋತ್ತಮಂ ಶ್ರೀಕೃಷ್ಣ ಹರೆ
ಪದ್ಮನಾಭಂ ಶ್ರೀಕೃಷ್ಣ ಹರೆ

ದಶ ಅವತಾರೀಂ ಕೃಷ್ಣ ಹರೆ
ಬಲಿ ಸಂಹಾರೀಂ ಕೃಷ್ಣ ಹರೆ
ನರಕೇಸರೀಂ ಶ್ರೀಕೃಷ್ಣ ಹರೆ
ಹರಿ ಮುರಾರೀಂ ಕೃಷ್ಣ ಹರೆ

ನಾರಾಯಣಂ ಕೃಷ್ಣ ಹರೆ
ನಿರಂಜನಂ ಕೃಷ್ಣ ಹರೆ
ನಿರ್ಗುಣಧಾಮಂ ಕೃಷ್ಣ ಹರೆ
ನಂದಗೋಪಾಲಂ ಕೃಷ್ಣ ಹರೆ

ಶ್ರೀಅರವಿಂದಂ ಕೃಷ್ಣ ಹರೆ
ಶ್ರೀಗೋವಿಂದಂ ಕೃಷ್ಣ ಹರೆ
ಯಶೋದಾನಂದಂ ಕೃಷ್ಣ ಹರೆ
ಯದುಮುಕುಂದಂ ಕೃಷ್ಣ ಹರೆ

ಶ್ರೀರಾಮರೂಪಂ ಕೃಷ್ಣ ಹರೆ
ಶ್ರೀಶ್ಯಾಮರೂಪಂ ಕೃಷ್ಣ ಹರೆ
ಶ್ರೀನಿವಾಸ ವಿಠಲಂ ಕೃಷ್ಣ ಹರೆ
ಸುಜನ ಸಂಪ್ರೀತಂ ಕೃಷ್ಣ ಹರೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೩.೦೭.೨೦೧೧

Friday, July 8, 2011

Shri Krishnana Nooraru Geethegalu - 134

ಬೇಡುವೆನೊ ನಿನ್ನ

ಬೇಡುವೆನೊ ನಿನ್ನ ದೇವಕಿಕಂದನೆ
ಸಲಹೊ ಶ್ರೀನಿಧಿ ಹರಿಗೋವಿಂದನೆ

ಚಂದನತಿಲಕನೆ ಚಂದಿರವದನನೆ
ಮಂಗಳಾಕ್ಷ ಶ್ರೀ ಮಂದಸ್ಮಿತನೆ
ನವರತ್ನಾಭರಣ ವಜ್ರಕಿರೀಟನೆ
ಶಂಖಚಕ್ರಗದಾ ಶ್ರೀಕೌಸ್ತುಭನೆ (೧)

ಸಿರಿಗಿರಿಧಾರಿ ಶ್ರೀಗೋವರ್ಧನನೆ
ರಾಧಾ ಪ್ರಿಯಕರ ಮಾಧವನೆ
ಗೋಕುಲನಂದನ ಮುರಳೀಧರನೆ
ದ್ವಾರಕಾಧೀಶ ಶ್ರೀಕೇಶವನೆ (೨)

ಮೀರೆಯ ಬಕುತಿಗೆ ಸೋತೊಲಿದವನೆ
ಅಷ್ಟವಕ್ರೆಯ ಕೃಷ್ಣ ಅಕ್ಕರೆಯವನೆ
ಶ್ರೀಶೇಷಶಯನ ಶ್ರೀನಿವಾಸ ವಿಠಲನೆ
ವೈಕುಂಠಪತಿ ಕಾಯೊ ಶ್ರೀವೇಂಕಟನೆ

ಬೇಡುವೆನೊ ನಿನ್ನ ದೇವಕಿಕಂದನೆ
ಸಲಹೊ ಶ್ರೀನಿಧಿ ಹರಿಗೋವಿಂದನೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೭.೨೦೧೧

Shri Krishnana Nooraru Geethegalu - 133

ಸಕಲ ಸುಪಾಲಂ

ಯದುಕುಲ ನಂದನನೆ ಮಾಧವ ದೇವಕಿ ಪ್ರಿಯಸುತನೆ

ಗೋಕುಲ ಪುರಜನ ಜೀವಸಂಪ್ರೀತಂ
ಮಥುರಾಧಿಪನೆ ನವನೀತಚೋರಂ (೧)

ಸುಶ್ರವ ಸರಿಗಮ ಶೃಂಗಾರಲೋಲಂ
ಸೃಷ್ಟಿಸ್ಥಿತಿಲಯ ಸಕಲ ಸುಪಾಲಂ (೨)

ಶ್ರೀನಿವಾಸ ವಿಠಲ ವೈಕುಂಠದೇವಂ
ಶ್ರೀನಿಧಿ ಸುಖಪತಿ ಮೂಜಗಕಾವಂ (೩)

ಯದುಕುಲ ನಂದನನೆ ಮಾಧವ ದೇವಕಿ ಪ್ರಿಯಸುತನೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೭.೨೦೧೧

Sunday, July 3, 2011

Shri Krishnana Nooraru Geethegalu - 132

ಶ್ರೀರಾಯ ಗುರುರಾಯ

ನೆಚ್ಚಿಬಂದೆನೊ ನಿನ್ನ ನರಹರಿಯೊಲಿದವನೆ
ಶ್ರೀರಾಯ ಗುರುರಾಯ ಗುರುಸಾರ್ವಭೌಮ

ಅಕ್ಷಯನೆ ಗುಣಧಾಮ ಸುಜನಕುಲ ಕ್ಷೇಮ
ಶ್ರೀಮಧ್ವಮತಸೋಮ ಸುಜ್ಞಾನದುಗಮ
ಶ್ರೀರಾಮ ಮಾನಸನೆ ಶ್ರೀಪಾದ ಪೂಜಿತನೆ
ಯತಿರಾಜ ಗುರುರಾಜ ಗುರುಸಾರ್ವಭೌಮ (೧)

ಹರಿಬಕುತಿಲೋಲ ಶ್ರೀ ಮುದ್ರಾಕ್ಷಮಾಲ
ಇಷ್ಟಾರ್ಥದಾಯಕನೆ ಶರಣ ಪರಿಪಾಲ
ಪುಣ್ಯವರ್ಧನ ದೇವ ಗುರುರಾಘವೇಂದ್ರನೆ
ಸುರೇಂದ್ರ ಸುಮತೀಂದ್ರ ಗುರುಸಾರ್ವಭೌಮ (೨)

ಭವದೆನ್ನ ಭಯಹರಿಸೊ ಭುವನಗಿರಿದೇವ
ಪ್ರಹ್ಲಾದ ಪ್ರತಿರೂಪ ಕಲಿಯುಗವ ಕಾವ
ಶ್ರೀನಿವಾಸ ವಿಠಲನ ಶ್ರೀಪಾದ ಸೇವಿಪನೆ
ಸಕಲರನು ಸಲಹಯ್ಯ ಗುರುಸಾರ್ವಭೌಮ (೩)

ನೆಚ್ಚಿಬಂದೆನೊ ನಿನ್ನ ನರಹರಿಯೊಲಿದವನೆ
ಶ್ರೀರಾಯ ಗುರುರಾಯ ಗುರುಸಾರ್ವಭೌಮ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೭.೨೦೧೧