Sunday, July 31, 2011

Shri Krishnana Nooraru Geethegalu - 143

ಪಾದ ಕರುಣ

ಕರೆ ಕೇಳದೇ ಕೃಷ್ಣ ಈ ದೀನ ಪಾಮರನ
ಮೊರೆಬಂದೆ ಪಾಲಿಸೈ ಪದುಮನಾಭ

ಶಿಲೆಯಾದಹಲ್ಯೆಯ ಸಕಲ ಶಾಪವನಳಿದು
ಸಲಹಿದನೆ ಕಾಯೆನ್ನ ಕರುಣಾಕರ
ಶಬರಿ ಸಹನೆಯೊಳು ಶ್ರೀರಾಮ ಬಾರೆನಲು
ಕರುಣಿಸಿ ಕಂಡವನೆ ದಯಾಸಾಗರ (೧)

ಕರಿಯದುವು ಹರಿಯೆನಲು ಅಗ್ನಿಸುರಳಿಯೊಳ
ರಳಿ ನೋವನೀಗಿದ ಪ್ರಭುವೆ ದೇವದೇವ
ಕಂದನವ ತಂದೆ ನೀ ಕಾಯೆಂದು ಮೊರೆಯಿಡಲು
ಕಂಭವನೆ ಸೀಳಿದನೆ ವಾಸುದೇವ (೨)

ಕಲಿಯ ಕತ್ತಲೆಯೊಳಗೆ ಹಾದಿಕಾಣೆನೊ ಹರಿಯೆ
ಗತಿಯಾಗೊ ಸುಜನಂಗೆ ನಾರಾಯಣ
ಮೇಲುಕೋಟೆಯ ಚೆಲುವ ಶ್ರೀನಿವಾಸ ವಿಠಲಯ್ಯ
ಎನಗಿರಲೊ ನಿನ್ನ ಪಾದಕರುಣ (೩)

ಕರೆ ಕೇಳದೇ ಕೃಷ್ಣ ಈ ದೀನ ಪಾಮರನ
ಮೊರೆಬಂದೆ ಪಾಲಿಸೈ ಪದುಮನಾಭ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೧.೦೭.೨೦೧೧

No comments:

Post a Comment