Thursday, September 8, 2011

Shri Krishnana Nooraru Geethegalu - 155

ಪಾಡುವೆನೊ ಪವನಸುತ

ಪಾಡುವೆನೊ ಪವನಸುತ ಪಾಲಿಪುದು ಅನವರತ
ಹರಿವಾಯುಗುರುವೆನಗೆ ನೀನೆ ದೇವ

ಎನಿತು ಜನುಮಗಳರಿಯೆ ಎನಿತು ಯೋನಿಗಳರಿಯೆ
ನೀ ಜೀವದೊಡೆಯನು ಬೊಂಬೆ ನಾನು
ಅರಿಯದೆ ಎನ್ನೆಡೆಯ ಅನ್ಯಾಂಧವನಳಿದು
ಸುಖದಿ ಪೊರೆಯುವುದೆನ್ನ ತಂದೆ ನೀನು (೧)

ತ್ರೇತೆಯೊಳು ಜನಕಸುತೆ ಶೋಕ ಪರಿಹರಿಸೆ
ದಶಶಿರನ ದುರುಮುರಿದ ಹನುಮದೇವ
ದ್ವಾಪರದೆ ಕುರುಸುತನ ಅಸುರತೊಡೆ ಹರಿದನೆ
ಶ್ರೀಧರ್ಮನನುಜ ನಮೋ ಭೀಮದೇವ (೨)

ಕಲಿಯೊಳಗೆ ಶ್ರೀಮಧ್ವ ರಾಯರೂಪದೊಲು
ಧರಣಿ ಧರ್ಮವ ಪೊರೆದ ರಾಯರಾಯ
ಶ್ರೀನಿವಾಸ ವಿಠಲನ ಶ್ರೀಪಾದ ಸೇವೆಯನು
ಪಾಲಿಪನೆ ಕರುಣದೊಳು ಸಲಹೊ ಜೀಯ (೩)

ಪಾಡುವೆನೊ ಪವನಸುತ ಪಾಲಿಪುದು ಅನವರತ
ಹರಿವಾಯುಗುರುವೆನಗೆ ನೀನೆ ದೇವ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೯.೦೯.೨೦೧೧

No comments:

Post a Comment