Monday, April 30, 2012

Shri Krishnana Nooraru Geethegalu - 230

ಕರ ಮುಗಿವೆನೊ

ಕರ ಮುಗಿವೆನೊ ಜೀಯ ರಾಘವೇಂದ್ರ ರಾಯ
ತಪ್ಪುನೆಪ್ಪು ಎನ್ನವೊಪ್ಪಿ ಕರುಣೆ ತೋರಿಸಯ್ಯ

ತುಂಗಾತೀರದ ಯತಿಯೆ ಸನ್ಮಂಗಳ ನಿಧಿಯೆ
ಪ್ರಹ್ಲಾದ ದಿವ್ಯರೂಪ ಅಮಿತ ಪುಣ್ಯಗಣಿಯೆ
ಮಂದಮತಿ ನಾ ಗತಿಯನರಿಯೆನೊ ಸುಗತಿ ತೋರೊ ಹರಿಯೆ
ಸಕಲ ಸುಗುಣ ಸಂಪನ್ನ ರಾಘವೇಂದ್ರ ದೊರೆಯೆ (೧)

ಭುವನಗಿರಿಯ ಭಾಗ್ಯವೆಮ್ಮ ವೇಂಕಟಾದಿ ನಾಮವೆ
ಗುರುಸುಧೀಂದ್ರ ಶಿಷ್ಯೋತ್ತಮ ದ್ವೈತಧರ್ಮ ದೀಪವೆ
ಸಕಲಭಾಷ್ಯರಾಯ ಗುರುವೆ ನ್ಯಾಯಸುಧಾಮೂರ್ತಿಯೆ
ಸಮ್ಮತದೊಳು ಸಲಹೆಮ್ಮನು ವ್ಯಾಸತೀರ್ಥರೂಪನೆ (೨)

ಶಾರದಾ ಸುಪುತ್ರನೆ ನ್ಯಾಯಪರಿಮಳಸೂತ್ರನೆ
ಕಲಿಯೊಳಗೆ ನರರ ಕಾಯೊ ರಾಯರಾಯರ ರಾಯನೆ
ನವನೀತಚೋರನೆಮ್ಮ ಶ್ರೀನಿವಾಸ ವಿಠಲರಾಯ
ಪುಣ್ಯಚರಣವ ಬಿಡದೆ ಪೂಜಿಪ ಕಶ್ಯಪನ ಕಂದನೆ (೩)

ಕರ ಮುಗಿವೆನೊ ಜೀಯ ರಾಘವೇಂದ್ರ ರಾಯ
ತಪ್ಪುನೆಪ್ಪು ಎನ್ನವೊಪ್ಪಿ ಕರುಣೆ ತೋರಿಸಯ್ಯ
       
 ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೦೪.೨೦೧೨

Shri Krishnana Nooraru Geethegalu - 229

ಮಾರುತಿರಾಯ

ನೀನಲ್ಲದಿನ್ನನ್ಯ ಆರೊ ಕಾಯುವರೆನ್ನ
ಮೂಲರಾಮರೇ ಒಲಿದ ಮಾರುತಿರಾಯ

ಇನಿತೆನ್ನ ಜನುಮಗಳ ಕರ್ಮಕಶ್ಮಲವಳಿದು
ಶ್ರೀರಾಮ ಚರಣವನು ತೋರಿಸೆನಗೆ
ಮಾತೆ ಸೀತಾದೇವಿ ಶೋಕಮಡು ಕೆಡುಹಿದನೆ
ನಿನ್ನೊಡೆಯ ರಘುಪತಿಯ ತೋರಿಸೆನಗೆ (೧)

ದ್ವಾಪರದೆ ಬಲವಂತ ಕುರುಗರ್ವ ಭಂಗಿತನೆ
ನಿನ್ನ ದೇವ ಕೃಷ್ಣನನು ತೋರಿಸೆನಗೆ
ಪ್ರಹ್ಲಾದರಾಯರ ಪ್ರತಿರೂಪ ಭೀಮಯ್ಯ
ನಿನ್ನ ನಾರಾಯಣನ ತೋರಿಸೆನಗೆ (೨)

ನೆಚ್ಚಿಬಂದ ನರರ ಮೆಚ್ಚಿ ಸಲಹುವೆನೆಂದ
ರಾಘವೇಂದ್ರರ ನೀನು ತೋರಿಸೆನಗೆ
ದಾಸಸೇವೆಯ ಮೆಚ್ಚಿ ನಿನ್ನೊಳಗೆ ನೆಲೆಯಾದ
ಶ್ರೀನಿವಾಸ ವಿಠಲನ್ನ ತೋರಿಸೆನಗೆ (೩)

ನೀನಲ್ಲದಿನ್ನನ್ಯ ಆರೊ ಕಾಯುವರೆನ್ನ
ಮೂಲರಾಮರೇ ಒಲಿದ ಮಾರುತಿರಾಯ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೯.೦೪.೨೦೧೨

Shri Krishnana Nooraru Geethegalu - 228

ಗೋವಿಂದ ಎನ್ನಿರೊ

ಗೋವಿಂದ ಎನ್ನಿರೊ ಗೋವಿಂದ ಗೋವಿಂದ
ಗೋವಿಂದ ಸ್ಮರಣೆಯೆ ಮೂಜಗದಾನಂದ

ಮೂಡಣ ಮೂಡುವ ಅರುಣನ ಕಿರಣವು
ಚಿಮ್ಮುವ ಹೊನ್ನಿನ ಒಡಲೊಳು ಗೋವಿಂದ
ಹಕ್ಕಿಯ ಕೊರಳಿನ ಇನಿದನಿ ಚಿಲಿಪಿಲಿ
ಗಾನದ ಸುಧೆಯೊಳು ಗೋವಿಂದ ಗೋವಿಂದ (೧)

ಹರಿಯುವ ಯಮುನೆಯ ಅಂತರಂಗದೊಳು
ಜುಳುಜುಳುಯೆನುವ ಜೋಗುಳ ಗೋವಿಂದ
ಅರಳಿದ ಮೊಗ್ಗಿನ ವರ್ಣದ ಹೂವ್ವಿಗೆ
ದುಂಬಿಯು ಹಾಡಿದೆ ಗೋವಿಂದ ಗೋವಿಂದ (೨)

ತ್ರೈಲೋಕ ಸುಜನರು ಪ್ರೀತಿಯಿಂ ಭಜಿಸುತ
ಸಲಹೊ ನೀನೆನ್ನುವ ಪುಣ್ಯನು ಗೋವಿಂದ
ಬಲ-ವಾಯು-ಮಧ್ವಗೊಲಿದ ಶ್ರೀನಿವಾಸ ವಿಠಲಯ್ಯ
ದಶದೊಳು ಧರೆಕಾವ ಗೋವಿಂದ ಗೋವಿಂದ (೩)

ಗೋವಿಂದ ಎನ್ನಿರೊ ಗೋವಿಂದ ಗೋವಿಂದ
ಗೋವಿಂದ ಸ್ಮರಣೆಯೆ ಮೂಜಗದಾನಂದ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೪.೨೦೧೨

Thursday, April 26, 2012

Shri Krishnana Nooraru Geethegalu - 227

ವಾಸುದೇವ ಕೃಷ್ಣ

ವಾಸುದೇವ ಕೃಷ್ಣ ದಿವ್ಯಚರಣ
ರಾಮ ಲಕುಮಿರಮಣ ಶೇಷಶಯನ

ಕಾಯೋ ಸುಂದರ ಶ್ಯಾಮ ಶೂರ ಶ್ರೀರಾಮ
ರಘುವಂಶ ಕುಲತಿಲಕ ಕೌಸಲ್ಯೆ ಪ್ರೇಮ
ಸುಗುಣಸಾಗರನಿಧಯೆ ಶಬರಿ ಬಕುತಿಯ ದೊರೆಯೆ
ಕಾಯೋ ಜಾನಕಿ ಹೃದಯ ಹನುಮ ಸಿರಿಯೆ (೧)

ಕಾಯೋ ದೇವಕಿಕಂದ ಆನಂದ ಗೋವಿಂದ
ಯದುವಂಶದುದ್ಧಾರ ಯಶೋದೆ ನಂದ
ಚಾಣಾಕ್ಷ ನಿಜಪಕ್ಷ ಧರ್ಮಪಾಂಡವ ರಕ್ಷ
ಕಾಯೋ ರಾಧೆರಮಣ ಮೂಲೋಕ ದಕ್ಷ (೨)

ಕಾಯೋ ವೈಕುಂಠಪುರವಾಸ ಜಗದೀಶ
ಭೂದೇವಿ-ಶ್ರೀದೇವಿ ಹೃದಯ ಪರಮೇಶ
ಧರಣಿಯೊಳು ದೀನಜನ ದುರಿತಹರ ಪರಿಪಾಲ
ಕಾಯೋ ಶ್ರೀಕಲಿವರದ ಶ್ರೀನಿವಾಸ ವಿಠಲ (೩)

ವಾಸುದೇವ ಕೃಷ್ಣ ದಿವ್ಯಚರಣ
ರಾಮ ಲಕುಮಿರಮಣ ಶೇಷಶಯನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೪.೨೦೧೨

Tuesday, April 24, 2012

Shri Krishnana Nooraru Geethegalu - 226

ಎನ್ನಾಣೆ ರಂಗ

ಆಣೆ ರಂಗ ಎನ್ನಾಣೆ ರಂಗ
ನಿನ್ನಂಥ ದೇವರನು ಕಾಣೆ ರಂಗ

ಜಲಬಿಂದು ನೀನಾದೆ ಬಿಂದು ಅಂಬುಧಿಯಾದೆ
ಮತ್ಸ್ಯ ವರಾಹ ಅವನೀಪತಿಯಾದೆ
ಅಮೃತದ ಮಥನದೊಳು ಮಂದಾರಧರನಾದೆ
ಬಲಿಯಹಂ ಶಿರಮೆಟ್ಟಿ ಶ್ರೀಪಾದನಾದೆ (೧)

ಕೃತದಿ ಸತ್ಯದ ಸತುವು ಶ್ರೀರಾಮ ತ್ರೇತೆಯೊಳು
ಕಂದಗೆ ಕರುಣೆಯೊಳು ಕೇಸರಿನರನಾದೆ
ಧರ್ಮದಾ ಪಾಂಡವಗೆ ಗರಿಕೇಶದವನಾದೆ
ಕಲಿಯೊಳೆಮ್ಮನು ಸಲಹೊ ಶ್ರೀನಿವಾಸ ವಿಠಲ (೨)

ಆಣೆ ರಂಗ ಎನ್ನಾಣೆ ರಂಗ
ನಿನ್ನಂಥ ದೇವರನು ಕಾಣೆ ರಂಗ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೦೪.೨೦೧೨

Friday, April 20, 2012

Shri Krishnana Nooraru Geethegalu - 225

ಸಿರಿಲಕುಮಿರಮಣ

ಶ್ರೀಹರಿಯೆ ಪಾಲಿಸೊ ಸಿರಿಲಕುಮಿರಮಣ
ಅಣುರೇಣುತೃಣಂಗಳ ಆದಿಯಿಂ ಸಲಹುವ

ಹರಿಯೆನಲು ಅಜಮಿಳನು ಅಕ್ಕರದಿ ಹರಸಿದನೆ
ಕರಿಯದುವು ಮೊರೆಯಿಡಲು ಕ್ಷಣದಿ ಒದಗಿದನೆ
ನಾರಾಯಣ ನೀನೆ ಗತಿಯೆನಲು ಪ್ರಹ್ಲಾದ
ಕಂಬವನು ಸೀಳಿ ತಾ ನರಸಿಂಹನಾದವನೆ (೧)

ರಾವಣನ ಶಿರಮುರಿದು ಶಬರಿಗೂ ಒಲಿದವನೆ
ದ್ವಾಪರದೆ ದುರುಹರಿದು ಧರ್ಮಜನ ಗೆಲಿಸಿದನೆ
ಕಲಿಯೊಳಗೆ ಸುಜನಂಗೆ ಸಕಲ ಮಂಗಳವೀವ
ವೈಕುಂಠಪತಿಯೆಮ್ಮ ಶ್ರೀನಿವಾಸ ವಿಠಲನೆ (೨)

ಶ್ರೀಹರಿಯೆ ಪಾಲಿಸೊ ಸಿರಿಲಕುಮಿರಮಣ
ಅಣುರೇಣುತೃಣಂಗಳ ಆದಿಯಿಂ ಸಲಹುವ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೪.೨೦೧೨

Monday, April 16, 2012

Shri Krishnana Nooraru Geethegalu - 224

ಮಂಗಳ ಕೃಷ್ಣ

ಮಂಗಳ ಕೃಷ್ಣ ಮಂಗಳ ಪೂರ್ಣವದನ ತಿಂಗಳ
ಮಂಗಳ ಕೃಷ್ಣ ಮಂಗಳ ಮಂಗಳ ಶುಭಮಂಗಳ

ರಘುವಂಶದುದ್ಧಾರ ಸತ್ಯಗುಣ ಸರದಾರ
ಪುರುಷೋತ್ತಮ ರಾಮ ಜಯಮಂಗಳ
ಜಾನಕೀ ಹೃದಯ ಶ್ರೀದುರಿತಸಂಹಾರ
ಹನುಮ ದೇವನೆ ರಾಮ ಜಯಮಂಗಳ (೧)

ಯದುಕುಲೋತ್ತಮ ಕೃಷ್ಣ ಶ್ರೀಕೇಶಗರಿಮುಕುಟ
ಜಯತು ದೇವಕಿ ಕಂದ ಜಯಮಂಗಳ
ಮುರಿದು ಕೆಡುಕರ್ಮಗಳ ಧರೆಧರ್ಮ ಪೊರೆದವನೆ
ಜಯತು ರಾಧೆಯ ದೇವ ಜಯಮಂಗಳ (೨)

ಶ್ರೀರಾಮ ಮಂಗಳ ಶ್ರೀಶ್ಯಾಮ ಮಂಗಳ
ದಶರೂಪದೊಡೆಯನೆ ಜಯಮಂಗಳ
ಎಮ್ಮಮ್ಮ ಸಿರಿಲಕುಮಿಯೊಪ್ಪಿದ ಚೆಲುವನೆ
ಶ್ರೀನಿವಾಸ ವಿಠಲಯ್ಯ ಜಯಮಂಗಳ (೩)

ಮಂಗಳ ಕೃಷ್ಣ ಮಂಗಳ ಪೂರ್ಣವದನ ತಿಂಗಳ
ಮಂಗಳ ಕೃಷ್ಣ ಮಂಗಳ ಮಂಗಳ ಶುಭಮಂಗಳ
\
       ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೦೪.೨೦೧೨

Thursday, April 12, 2012

Shri Krishnana Nooraru Geethegalu - 223

ಪಾಮರ ಜನುಮ

ಪಾವನವಾಗಿಸೊ ಪಾಮರ ಜನುಮ
ಹನುಮನಿಗೊಲಿದನೆ ದೊರೆಯೆನ್ನ ಶ್ರೀರಾಮ

ನುಡಿಯಲಿಲ್ಲವೊ ಎನ್ನ ನಾಲಗೆಯು ರಾಮನೆಂದು
ನೋಡಲಿಲ್ಲವೊ ನಯನ ಆ ದಿವ್ಯರೂಪವನ್ನು
ಕರ್ಣ ಮರೆತವೊ ದೇವ ಶ್ರೀನಾಮ ಶ್ರವಣವನು
ಆದಿದೇವಗೆ ಕರವು ಮುಗಿವುದು ಪುಣ್ಯವೆಂದು (೧)

ನೀ ತಂದೆ ನಾ ಬಂದೆ ದಶರಥಸುತ ರಾಮ
ನಿನ್ನಿಂದಲೆ ಸಕಲ ಅರಿವಾಯ್ತೊ ಜಗಕ್ಷೇಮ
ಮಂದಮತಿಯನು ಕ್ಷಮಿಸೊ ಶ್ರೀನಿವಾಸ ವಿಠಲಯ್ಯ
ಕರ್ಮ ಕಶ್ಮಲವಳಿದು ನೀ ಕಾಯೊ ಎನ್ನಯ್ಯ (೨)

ಪಾವನವಾಗಿಸೊ ಪಾಮರ ಜನುಮ
ಹನುಮನಿಗೊಲಿದನೆ ದೊರೆಯೆನ್ನ ಶ್ರೀರಾಮ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೨.೦೪.೨೦೧೨

Friday, April 6, 2012

Shri Krishnana Nooraru Geethegalu - 222

ಗುರುರಾಯ ವರದಾಯ

ಗುರುರಾಯರ ವರದಾಯರ ಸ್ಮರಣೆ ಮಾಡಿರೊ
ಶ್ರೀಹರಿಯ ಪದತಲದಿ ನಿಂತು ನರರ ಕಾವ ಎಮ್ಮ

ತುಂಗೆಯಂದದಿ ಸ್ಫಟಿಕ ಶುದ್ಧ ಆತ್ಮವೆಮ್ಮ ರಾಘವೇಂದ್ರ
ದೇವರೂಪಿ ಶಂಖುಕರ್ಣ ಪ್ರಹ್ಲಾದ ವ್ಯಾಸರಾಯ
ಮಂದಮತಿಗೆ ಸುಮತೀಂದ್ರರೊ ಅಕ್ಷಯ ಸಿರಿಸುಖದಾಯ
ಕಲಿವರದ ಕಲ್ಪವೃಕ್ಷ ಕಾಮಧೇನು ಮಂತ್ರಾಲಯದ (೧)

ಭುವನಗಿರಿಯ ಭಾಗ್ಯವಯ್ಯ ಮೂಲರಾಮರೊಲಿದ ಜೀಯ
ಕರುಣಾನಿಧಿ ಸುಗುಣ ಶರಧಿ ಎಮ್ಮ ಪುಣ್ಯ ರಾಘವೇಂದ್ರ
ಮೇಲುಕೋಟೆಯ ಚೆಲುವನೆಮ್ಮ ಶ್ರೀನಿವಾಸ ವಿಠಲರಾಯನ
ಹನುಮ-ಭೀಮ-ಮಧ್ವ ರಾಯ ರೂಪದಿಂದ ಸೇವೆಗೈದ (೨)

ಗುರುರಾಯರ ವರದಾಯರ ಸ್ಮರಣೆ ಮಾಡಿರೊ
ಶ್ರೀಹರಿಯ ಪದತಲದಿ ನಿಂತು ನರರ ಕಾವ ಎಮ್ಮ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೬.೦೪.೨೦೧೨

Tuesday, April 3, 2012

Shri Krishnana Nooraru Geethegalu - 221

ಭಜಿಸೊ ಶ್ರೀರಾಮನ

ಭಜಿಸೊ ಶ್ರೀರಾಮನ ಲೋಕಪಾವನನ
ಮಾತೆಯಂದದೊಳು ತ್ರಿಜಗವ ಪೊರೆವವನ

ರಾಮರಾಮಯೆನಲು ಭವಬವಣೆಯನಳಿದು
ಇಹದೀ ಬದುಕೊಳು ಬೆಳಕಾಗುವ
ನರನೀ ಜನುಮದ ನೂರು ಕರ್ಮವ ಕಳೆದು
ಪರಮದ ಮುಕುತಿಗೆ ಹಾದಿಯಾಗುವ (೧)

ರಾಮರಾಮಯೆನಲು ದುರಿತವ ಸಂಹರಿಸಿ
ಧರೆಯೊಳು ಸುಜನಂಗೆ ಸುಖವಾಗುವ
ಕೇಸರಿಸುತನಂತೆ ಪಾದಸೇವೆಯಗೈಯೆ
ಬಕುತರ ಎದೆಯೊಳು ಸ್ಥಿರವಾಗುವ (೨)

ರಾಮನೆಂದರು ಇವನೆ ಶ್ಯಾಮನೆಂದರು ಇವನೆ
ರಘುವಂಶಜ ಶ್ರೀಗೋಕುಲ ಗೋಪಾಲ
ದಶದೊಳು ಧರಣಿಯ ಕಾವ ಪಾಲಕನಿವನೆ
ಸಿರಿಲಕುಮಿಯ ದೇವ ಶ್ರೀನಿವಾಸ ವಿಠಲ (೩)

ಭಜಿಸೊ ಶ್ರೀರಾಮನ ಲೋಕಪಾವನನ
ಮಾತೆಯಂದದೊಳು ತ್ರಿಜಗವ ಪೊರೆವವನ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೪.೨೦೧೨

Sunday, April 1, 2012

Shri Krishnana Nooraru Geethegalu - 220

ಶ್ರೀರಾಮನಾಮ

ಸ್ಮರಣೆಯೆ ಪುಣ್ಯವೊ ಶ್ರೀರಾಮ ನಾಮ
ಪಾದಸೇವೆಯಗೈದು ಧನ್ಯನಾದನೊ ಹನುಮ

ನಯನವು ನೋಡುವ ದಿವ್ಯರೂಪವು ರಾಮ
ಕರ್ಣವು ಕೇಳುವ ಮಧುರಗಾನವು ರಾಮ
ನಾಸಿಕ ಉಸುರಿಸುವ ಪುಣ್ಯಗಂಧನು ರಾಮ
ನಾಲಗೆ ನುಡಿಯುವ ದಿವ್ಯನಾಮ ರಾಮ (೧)

ಇರುಳ ಕಳೆವನು ರಾಮ ದುರುಳ ತೊಳೆವನು ರಾಮ
ಪಿತವಾಕ್ಯ ಪರಿಪಾಲ ಪುರುಷೋತ್ತಮ ರಾಮ
ಶಬರಿಯ ಪ್ರಿಯರಾಮ ಶಿಲೆಗೊಲಿದವ ರಾಮ
ಶ್ರೀನಿವಾಸ ವಿಠಲ ತಾ ಶ್ಯಾಮ ಶ್ರೀರಾಮ (೨)

ಸ್ಮರಣೆಯೆ ಪುಣ್ಯವೊ ಶ್ರೀರಾಮ ನಾಮ
ಪಾದಸೇವೆಯಗೈದು ಧನ್ಯನಾದನೊ ಹನುಮ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೨.೦೪.೨೦೧೨

Shri Krishnana Nooraru Geethegalu - 219

ಮೋಹನ ಮನಮೋಹನ

ಮೋಹನ ಮನಮೋಹನ ಬಾರೊ ಎನ್ನ ಮೋಹನ
ಎಲ್ಲಿರುವೆಯೊ ಸಖನೆ ಕೃಷ್ಣ ರಾಧೆ ಜೀವ ಜೀವನ

ಎದೆಯ ಬನದೊಳು ಬಯಕೆ ಸುಮಗಳ ವರ್ಷ ಸುರಿಸುತ
ಪ್ರೇಮ ವೇಣುವ ನುಡಿಸಿ ಎನ್ನೊಳು ಹರುಷ ಹರಿಸುತ
ವಿರಹದೆನ್ನ ಹೃದಯ ವೀಣೆಯ ಜೀವ ಮಿಡಿಸುತ
ಒಲುಮೆ ಯಮುನೆಯ ಹರಿಸೊ ಎನ್ನೊಳು ದೇವಕಿಸುತ (೧)

ಮನದ ಮಾಮರ ಚಿಗುರು ಹಸಿರೊ ಗಾನಗೈದಿವೆ ಕೋಗಿಲೆ
ಬೃಂದಾವನದಿ ಸಿಂಗಾರ ಚೈತ್ರವೊ ಬಂದು ಸೇರೊ ಈಗಲೆ
ಯುಗಯುಗಗಳ ಪ್ರೇಮವೆಮ್ಮದು ಮರೆತೆಯೆನೊ ಮಾಧವ
ಶ್ರೀನಿವಾಸ ವಿಠಲ ದೇವನೆ ಸನಿಹ ಬಾರೊ ಕೇಶವ (೨)

ಮೋಹನ ಮನಮೋಹನ ಬಾರೊ ಎನ್ನ ಮೋಹನ
ಎಲ್ಲಿರುವೆಯೊ ಸಖನೆ ಕೃಷ್ಣ ರಾಧೆ ಜೀವ ಜೀವನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೧.೦೩.೨೦೧೨