Sunday, April 1, 2012

Shri Krishnana Nooraru Geethegalu - 219

ಮೋಹನ ಮನಮೋಹನ

ಮೋಹನ ಮನಮೋಹನ ಬಾರೊ ಎನ್ನ ಮೋಹನ
ಎಲ್ಲಿರುವೆಯೊ ಸಖನೆ ಕೃಷ್ಣ ರಾಧೆ ಜೀವ ಜೀವನ

ಎದೆಯ ಬನದೊಳು ಬಯಕೆ ಸುಮಗಳ ವರ್ಷ ಸುರಿಸುತ
ಪ್ರೇಮ ವೇಣುವ ನುಡಿಸಿ ಎನ್ನೊಳು ಹರುಷ ಹರಿಸುತ
ವಿರಹದೆನ್ನ ಹೃದಯ ವೀಣೆಯ ಜೀವ ಮಿಡಿಸುತ
ಒಲುಮೆ ಯಮುನೆಯ ಹರಿಸೊ ಎನ್ನೊಳು ದೇವಕಿಸುತ (೧)

ಮನದ ಮಾಮರ ಚಿಗುರು ಹಸಿರೊ ಗಾನಗೈದಿವೆ ಕೋಗಿಲೆ
ಬೃಂದಾವನದಿ ಸಿಂಗಾರ ಚೈತ್ರವೊ ಬಂದು ಸೇರೊ ಈಗಲೆ
ಯುಗಯುಗಗಳ ಪ್ರೇಮವೆಮ್ಮದು ಮರೆತೆಯೆನೊ ಮಾಧವ
ಶ್ರೀನಿವಾಸ ವಿಠಲ ದೇವನೆ ಸನಿಹ ಬಾರೊ ಕೇಶವ (೨)

ಮೋಹನ ಮನಮೋಹನ ಬಾರೊ ಎನ್ನ ಮೋಹನ
ಎಲ್ಲಿರುವೆಯೊ ಸಖನೆ ಕೃಷ್ಣ ರಾಧೆ ಜೀವ ಜೀವನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೧.೦೩.೨೦೧೨

No comments:

Post a Comment