Thursday, October 11, 2012

Shri Krishnana Nooraru Geethegalu - 306

ಒಂಟಿ ಇಹಳು ರಾಧೆ

ಒಂಟಿ ಇಹಳು ರಾಧೆ ಒಲವ ವೃಂದಾವನದೆ
ಪಡುತಿಹಳು ಎದೆಬಾಧೆ ಶ್ಯಾಮನಿರದೆ

ಹೃದಯದಾ ಕೋಕಿಲವು ದಿವ್ಯಮೌನವ ತಳೆದು
ಮುರಳಿ ಮೋಹನಗಾನ ಕಾಯುತಿಹುದು
ವಡಲಿನಾ ಮಣಿವೀಣೆ ನವರಾಗದೊಳು ನಲಿಯೆ
ಬಾರೊ ವೈಣಿಕ ನುಡಿಸೊ ಎನುತಲಿಹುದು (೧)

ಮುಡಿಯೊಳಗೆ ಮಲ್ಲಿಗೆಯು ಘಮದ ಕಂಪನು ಸೂಸಿ
ಬರುವನೇನೆ ಅವನು ಕೇಳುತಿಹಳು
ಹರಿವ ಜುಳುಜುಳು ಯಮುನೆ ಯಾರಿಗೋ ಪಿಸುಪಿಸನೆ
ರಾಧೆ ಪ್ರೇಮದ ವ್ಯಥೆಯ ಪೇಳುತಿಹಳು (೨)

ಇರುಳಿನಾಗಸದಲ್ಲಿ ನಗುವ ಹುಣ್ಣಿಮೆ ಚಂದ್ರ
ಒಲುಮೆ ತಿಂಗಳ ಧರೆಗೆ ಸುರಿಯುತಿಹನು
ಶ್ರೀನಿವಾಸ ವಿಠಲನವ ನಿನ್ನ ಪ್ರಾಣದ ಕೃಷ್ಣ
ಬರುವನೆ ನೋಯದಿರು ಎನುತಲಿಹನು (೩)

ಒಂಟಿ ಇಹಳು ರಾಧೆ ಒಲವ ವೃಂದಾವನದೆ
ಪಡುತಿಹಳು ಎದೆಬಾಧೆ ಶ್ಯಾಮನಿರದೆ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೧೦.೨೦೧೨

No comments:

Post a Comment