Thursday, October 18, 2012

Shri Krishnana Nooraru Geethegalu - 310

ಆವ ಮೋಹವೊ ತಿಳಿಯೆ ರಾಧೆ

ಆವ ಮೋಹವೊ ತಿಳಿಯೆ ರಾಧೆ ಎನ್ನ ಸೆಳೆದಿದೆ ನಿನ್ನೆಡೆ
ಒಂಟಿ ಬೇಸರ ಭಾರ ತನುವು ಸನಿಹ ಬಯಸಿದೆ ಎನ್ನೆದೆ

ಹೃದಯಬನವಿದು ಖಾಲಿಖೋಲಿಯು ವಿರಹಗಾನವೆ ಎಲ್ಲೆಡೆ
ನುಡಿವ ಮುರಳಿಯು ಮೌನವಾಗಿದೆ ರಾಗವೆದೆಯೊಳು ನಲುಗಿದೆ (೧)

ಬಿರಿದ ಅಧರವು ಜೇನಮಳೆಯನು ಬಯಸಿ ಕಾದಿದೆ ನಿನ್ನನೇ
ಮೌನದೊಳಗಿನ ಪ್ರೇಮಕವಿತೆಯು ಮಾತನಾಡದೆ ಸುಮ್ಮನೆ (೨)

ಅವನು ಬಾರನು ಇವಳು ಕಾವಳು ಜಗವು ಎಮ್ಮೆಡೆ ನಗುತಿದೆ
ಕಾವ ವಿರಹದಿ ಪಕ್ವ ಪ್ರೇಮವು ಎನುವ ಸತ್ಯವ ಮರೆತಿದೆ (೩)

ಆವ ಮೋಹವೊ ತಿಳಿಯೆ ರಾಧೆ ಎನ್ನ ಸೆಳೆದಿದೆ ನಿನ್ನೆಡೆ
ಒಂಟಿ ಬೇಸರ ಭಾರ ತನುವು ಸನಿಹ ಬಯಸಿದೆ ಎನ್ನೆದೆ

    ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೮.೧೦.೨೦೧೨

No comments:

Post a Comment