Tuesday, October 11, 2011

Shri Krishnana Nooraru Geethegalu - 170

ನರಿಯು ಮಜ್ಜನ ಮಾಡಿತೊ

ನರಿಯು ಮಜ್ಜನ ಮಾಡಿತೊ ನರಿಹರಿ
ನರಿಯು ಮಜ್ಜನ ಮಾಡಿತೊ

ಕೇಡ ಬಗೆಯೇನೆಂದು ಊರ ಹೊಳೆಗೆ ಬಂದು
ಗಂಧ ಸುಗಂಧದ ಮಾರ್ಜಕ ತಂದು
ಒಳಶುದ್ಧಿ ಅರಿಯದೆ ಬರಿ ತೊಗಲನೆ ತೊಳೆದು
ಶುದ್ಧಾತಿ ಪರಿಶುದ್ಧ ತಾನೆಂದು ಪಾಡುತ (೧)

ಪಟ್ಟೆಬಟ್ಟೆಯನುಟ್ಟು ಗೋಟುನಾಮವನಿಟ್ಟು
ಉಗ್ರುಪವಾಸದ ಪಣವನು ತೊಟ್ಟು
ವಣಮಂತ್ರ ವಟಗುಡುತ ಒಳಹಲ್ಲ ಮಸೆಯುತ
ಧನ್ಯಾತಿ ಧನ್ಯನು ತಾನೆಂದು ತೋರುತ (೨)

ಆರೆಂಬೊ ಅಸುರರು ಆಸೆಮಾಂಸವ ಸುಟ್ಟು
ಬಡಿಯೆ ನಾಸಿಕಕೆ ನರಿಯದು ದಿಕ್ಕೆಟ್ಟು
ಠುಸ್ಸಾಯ್ತೊ ಠಕ್ಕನ ಪಾರಮಾರ್ಥದ ಗುಟ್ಟು
ಓಡಿತೊ ಶ್ರೀನಿವಾಸ ವಿಠಲನ್ನೇ ಬಿಟ್ಟು (೩)

ನರಿಯು ಮಜ್ಜನ ಮಾಡಿತೊ ನರಿಹರಿ
ನರಿಯು ಮಜ್ಜನ ಮಾಡಿತೊ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೧೦.೨೦೧೧

No comments:

Post a Comment