Saturday, October 15, 2011

Shri Krishnana Nooraru Geethegalu - 173

ಶ್ರೀಹರಿಯೆ ಕೃಷ್ಣ

ನೀನಿರದೆ ನಾನ್ಯಾರೊ ನಿನ್ನದೀ ಅವನಿಯೊಳು
ನಿನ್ನಿಂದಲೆನ್ನಿರುವೊ ಶ್ರೀಹರಿಯೆ ಕೃಷ್ಣ

ಈ ಬುವಿಯು ನಿನ್ನದೊ ಭಾನು ರವಿ ಸೋಮ
ಜಲವಾಯು ಚರಾಚರಕೆ ನೀ ಜೀವಕಾಮ
ಅಖಿಲಾಂಡನು ನೀನೊ ಅಣುವಿನೊಳ ಅಣುವು ನಾ
ಕರುಣದೊಳು ಕಾಯೆಮ್ಮ ಗೋವಿಂದ ಕೃಷ್ಣ (೧)

ಮತ್ಸ್ಯರೂಪನೊ ನೀನು ವರಾಹಾದಿಕೂರ್ಮನೊ
ಪರಶುಧರ ನರಸಿಂಹ ನಾರಾಯಣ
ಹಲವು ರೂಪದೊಳುದಿಸಿ ಸುಜನ ಶಾಪವನಳಿಸಿ
ನರಕುಲವನುಳಿಸಿದನೆ ದಶದೇವ ಕೃಷ್ಣ (೨)

ತ್ರೇತೆಯೊಳ ಮೂಲರಾಮ ದ್ವಾಪರದೆ ಮೇಘಶ್ಯಾಮ
ಮುಖ್ಯಪ್ರಾಣ ಮಧ್ವಾದಿ ರಾಯರಾಯ
ಮೇಲುಕೋಟೆಯ ಚೆಲುವ ಶ್ರೀನಿವಾಸ ವಿಠಲಯ್ಯ
ಸಕಲರೊಳು ಸಲಹೆನ್ನ ಸುಖದೊಳಗೆ ಕೃಷ್ಣ (೩)

ನೀನಿರದೆ ನಾನ್ಯಾರೊ ನಿನ್ನದೀ ಅವನಿಯೊಳು
ನಿನ್ನಿಂದಲೆನ್ನಿರುವೊ ಶ್ರೀಹರಿಯೆ ಕೃಷ್ಣ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೧೦.೨೦೧೧

No comments:

Post a Comment