Thursday, July 19, 2012

Shri Krishnana Nooraru Geethegalu - 250

ಏಕೆ ಹೀಗೆ ಮೌನ ರಾಧೆ

ಏಕೆ ಹೀಗೆ ಮೌನ ರಾಧೆ ಮನವ ತೆರೆದು ಹೇಳೆ
ಗೋಧೂಳಿಯ ಘಮಘಮವಿದೆ ಬರುವ ಶ್ಯಾಮ ತಾಳೆ

ಗೋಕುಲದೆ ಮುದ್ದುಕರುಗಳು ಮಾತೆಮೊಲೆಯ ಮರೆತಿವೆ
ಪುಟ್ಟ ಕಾಲ್ಗಳ ಕಿರುಗೆಜ್ಜೆಯು ದಿವ್ಯಮೌನ ತಳೆದಿವೆ (೧)

ಯುಮುನೆಯೆದೆಯೊಳು ಚಡಪಡಿಕೆಯು ವೃಂದಾವನದಿ ಬೇಸರ
ನಲಿಯುತಿರಲು ಶ್ಯಾಮ ನಿನ್ನೊಡ ಚುಕ್ಕೆಯಾಗಸ ಸುಂದರ (೨)

ಚಿತ್ರಗಡಿಗೆಯ ನೊರೆಯ ಹಾಲು ಬಾರೊ ಕೃಷ್ಣ ಎನುತಿದೆ
ಒಲುಮೆರಾಗವ ನುಡಿಯೆ ವೀಣೆಯು ತೂಗುಮಂಚದಿ ಕಾದಿದೆ (೩)

ಮೌನ ಮುರಿಯೆ ನೋವ ತೊರೆಯೆ ಶ್ಯಾಮ ಬಂದೇ ಬರುವನು
ಶ್ರೀನಿವಾಸ ವಿಠಲ ಕೃಷ್ಣನು ಪ್ರೀತಿಧಾರೆಯ ಎರೆವನು (೪)

ಏಕೆ ಹೀಗೆ ಮೌನ ರಾಧೆ ಮನವ ತೆರೆದು ಹೇಳೆ
ಗೋಧೂಳಿಯ ಘಮಘಮವಿದೆ ಬರುವ ಶ್ಯಾಮ ತಾಳೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೯.೦೭.೨೦೧೨


No comments:

Post a Comment