Saturday, July 7, 2012

Shri Krishnana Nooraru Geethegalu - 245

ಆಗಮನ

ರಾಧೆಯೆದೆಯೊಳು ಮೌನಯಾನ ಕಾಯುತಿದೆ ಬೃಂದಾವನ
ಗೋಧೂಳಿಯ ಸಂಭ್ರಮದೊಳು ಬರುವ ಎಮ್ಮ ಶ್ಯಾಮನ

ಯಮುನೆಯೊಡಲೊಳು ಚಿಂತಾಲಹರಿ ಬರುವನೆ ಬಾರದಿರುವನೆ
ಕಾಯಿಸದಿರೊ ವಿರಹಿ ರಾಧೆಯ ಎನುವುದದರ ಪ್ರಾರ್ಥನೆ (೧)

ಚುಕ್ಕೆ ಬಾನೊಳು ಚಂದ್ರ ಬೇಸರ ಬರುವನೆ ಬಾರದಿರುವನೆ
ನಡುವ ಬಳಸಿ ರಾಧೆಯಧರಕೆ ಸಿಹಿಯೊಲುಮೆಯ ಸುರಿವನೆ (೨)

ತೂಗುಮಂಚವು ಕೇಳುತಿಹುದು ಬರುವನೆ ಬಾರದಿರುವನೆ
ರಾಧೆ ಸನಿಹದ ಸಂಗಸುಖದೊಳು ಹರ್ಷೋದ್ಘಾರಗರೆವನೆ (೩)

ಮುದ್ದುವೀಣೆಯು ಮೌನವಾಗಿದೆ ಬರುವನೆ ಬಾರದಿರುವನೆ
ರಾಧೆ ಹೃದಯದ ಜೀವತಂತಿಯ ಮಿಡಿವನೆ ರಾಗ ನುಡಿವನೆ (೪)

ಯುಗದ ಸಾಕ್ಷಿಯ ಬೃಂದಾವನವಿದು ರಾಧೆ-ಮಾಧವ ಮಿಲನಕೆ
ಎಂಬ ನಿಜವದ ಶ್ರೀನಿವಾಸ ವಿಠಲನವನು ಮರೆವನೆ (೫)

ರಾಧೆಯೆದೆಯೊಳು ಮೌನಯಾನ ಕಾಯುತಿದೆ ಬೃಂದಾವನ
ಗೋಧೂಳಿಯ ಸಂಭ್ರಮದೊಳು ಬರುವ ಎಮ್ಮ ಶ್ಯಾಮನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೭.೨೦೧೨

No comments:

Post a Comment