Saturday, July 28, 2012

Shri Krishnana Nooraru Geethegalu - 258

ಶ್ಯಾಮನೀಗ ಬರುವನೆ

ಹೇಳೆ ಸಖಿ ಹೇಳೆ ಸಖಿ ಶ್ಯಾಮನೀಗ ಬರುವನೆ
ಶ್ರಾವಣಿಯ ವಿರಹದೊಡಲಿಗೆ ಪ್ರೀತಿಹೂಮಳೆ ತರುವನೆ

ತೇಲಿಬರುತಿಹ ತಿಳಿಗಾಳಿಯೆ ರಾಧೆ ಮೊರೆಯನು ಕೇಳೆಯ
ಕೊಳಲನೂದುವ ಗೊಲ್ಲಚೆಲ್ವನ ಹಾದಿಯೊಳು ನೀ ಕಂಡೆಯ
ಬರುವೆನೆಂದ ಬರೆವೆನೆಂದ ಎನ್ನ ಹೃದಯದ ಪಟದೊಳು
ಮಧುರಕಾವ್ಯದ ನವಪಲ್ಲವಿ ಎನ್ನ ಮೈಮನ ವನದೊಳು(೧)

ಏನೊ ತಿಳಿಯೆ ಎನ್ನ ಶ್ಯಾಮನ ಮುರಳಿ ಮೌನವ ತಾಳಿದೆ
ಒಂಟಿಯಾಗಿಹ ರಾಧೆಯೆದೆಯನು ಮೌನಶರವದು ಕೊಲುತಿದೆ
ಜಗದ ಮಾತಿಗೆ ಏಕೊ ಬೇಸರ ಬಾರೊ ಪ್ರಾಣ ಶ್ರೀಕೃಷ್ಣನೆ
ಶ್ರೀನಿವಾಸ ವಿಠಲ ನೀನು ನಿಜದಿ ಭಾಮೆಗು ನಲ್ಲನೆ (೨)

ಹೇಳೆ ಸಖಿ ಹೇಳೆ ಸಖಿ ಶ್ಯಾಮನೀಗ ಬರುವನೆ
ಶ್ರಾವಣಿಯ ವಿರಹದೊಡಲಿಗೆ ಪ್ರೀತಿಹೂಮಳೆ ತರುವನೆ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೭.೨೦೧೨

No comments:

Post a Comment