Saturday, April 30, 2011

Shri Krishnana Nooraru Geethegalu - 089

ಕಾಯಬೇಕೊ ದೀನ ನಾ

ಪಾಂಡುರಂಗ ನಿನ್ನ ಸಂಗಯಿರಲೆನಗೆ ಅನುಕ್ಷಣ
ಭಕ್ತವತ್ಸಲ ಕೃಷ್ಣ ಕಾಯಬೇಕೊ ದೀನ ನಾ

ಕಂಸಕತ್ತಲೊಳುದಿಸಿ ಗೋಕುಲದಿ ನೆಲೆಸಿ
ಅಬ್ಬರಿಸಿದಸುರರಹಂ ಮೆಟ್ಟಿ ಸಂಹರಿಸಿ
ಶುದ್ಧಾಂತರಂಗದೊಳು ಶ್ರೀರಂಗ ಗತಿಯೆನಲು
ಉದ್ಧರಿಸಿ ಸಲಹುವನೆ ಬಿಡದೆ ಕಾಯೆನ್ನ (೧)

ಆಚಾರ ಸುವಿಚಾರದಾಳವರಿಯೆನೊ ಹರಿಯೆ
ನಿನ್ನ ಶ್ರೀನಾಮದುಚ್ಛಾರದೊರತು
ಎನ್ನಂತರಂಗದೊಳು ಹೊಕ್ಕಾರು ದೈತ್ಯರನು
ದೂರಟ್ಟಿ ಜಗಜಟ್ಟಿ ಬಿಡದೆ ಕಾಯೆನ್ನ (೨)

ಆದಿಯೊಳು ಜಲರೂಪ ಕೃತದೊಳಗೆ ಮತ್ಸ್ಯ
ತ್ರೇತೆಯೊಳು ಶ್ರೀರಾಮ ಗೋಕುಲದ ಕೃಷ್ಣ
ಕಲಿಯೊಳಗೆ ವೇಂಕಟೇಶ ಶ್ರೀನಿವಾಸ ವಿಠಲಯ್ಯ
ನೆಚ್ಚಿ ಬಂದಿಹೆ ನಿನ್ನ ಬಿಡದೆ ಕಾಯೆನ್ನ (೩)

ಪಾಂಡುರಂಗ ನಿನ್ನ ಸಂಗಯಿರಲೆನಗೆ ಅನುಕ್ಷಣ
ಭಕ್ತವತ್ಸಲ ಕೃಷ್ಣ ಕಾಯಬೇಕೊ ದೀನ ನಾ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೦೫.೨೦೧೧

Thursday, April 28, 2011

Shri Krishnana Nooraru Geethegalu - 088

ಪಂಢರಿ ನಮೊ ಪಂಢರಿ

ಪಂಢರಿ ನಮೊ ಪಂಢರಿ ಪಾಂಡುರಂಗ ಪಂಢರಿ
ಸಾಧುಸಂತ ಸುಜನಗೊಲಿದ ಪಂಢರಿ ನಮೊ ಪಂಢರಿ

ಪಂಢರಿ ನಮೊ ಪಂಢರಿ ಪಾಂಡುರಂಗ ಪಂಢರಿ
ತ್ರೇತೆಯೊಳಗೆ ರಾಮರೂಪನೆ ಪುಣ್ಯಪುರುಷನೆ ಶ್ರೀಹರಿ (೧)

ಪಂಢರಿ ನಮೊ ಪಂಢರಿ ಪಾಂಡುರಂಗ ಪಂಢರಿ
ದ್ವಾಪರದಿ ಶ್ಯಾಮರೂಪನೆ ಯಾದವೇಂದ್ರನೆ ಮುರಾರಿ (೨)

ಪಂಢರಿ ನಮೊ ಪಂಢರಿ ಪಾಂಡುರಂಗ ಪಂಢರಿ
ಕಲಿಯೊಳಗೆ ಶ್ರೀನಿವಾಸ ವಿಠಲರೂಪನೆ ನರಹರಿ (೩)

ಪಂಢರಿ ನಮೊ ಪಂಢರಿ ಪಾಂಡುರಂಗ ಪಂಢರಿ
ಸಾಧುಸಂತ ಸುಜನಗೊಲಿದ ಪಂಢರಿ ನಮೊ ಪಂಢರಿ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೮.೦೪.೨೦೧೧

Tuesday, April 26, 2011

Shri Krishnana Nooraru Geethegalu - 087


ನೀ ಮಾಡಿದಡುಗೆ


ನೀ ಮಾಡಿದಡುಗೆಯ ನೀನೇ ಉಣಬೇಕು
ಉಪ್ಪುಖಾರದ ಲೆಕ್ಕ ಶ್ರೀಹರಿಗಿಡಬೇಕು

ಧರ್ಮವ ಮರೆತಯ್ಯೋ ಅಧರ್ಮ ಬೆರೆತಡುಗೆ
ಕದ್ದಾಡಿ ಕನಕವ ಕಾಯ್ದಿಟ್ಟ ಅಡುಗೆ
ಅನ್ಯರ ಹೀನದೊಳಾಡಿ ಅಬ್ಬರದಹಂ ಅಡುಗೆ
ಶ್ರೀಹರಿಯೊಪ್ಪದ ಸಪ್ಪಾದ ಅಡುಗೆ (೧)

ಬಕುತಿಯ ಮರೆತಯ್ಯೋ ಶಕುತಿ ಮೆರೆದಡುಗೆ
ಹೆಣ್ಣು ಮಣ್ಣಿನ ಮೋಹ ಮದವೇರಿದಡುಗೆ
ತ್ರೇತೆಯಿಂ ಕಲಿವರೆಗೂ ಕುಣಿದ ಕೇಕೆಯ ಅಡುಗೆ
ದ್ವಾಪರದಿ ಕೇಶವನು ಕೆಣಕಿ ಕೆಟ್ಟಡುಗೆ (೨)

ಮನಶುದ್ಧ ಪಾತ್ರೆಯಲಿ ಮಾಡಬೇಕೊ ಅಡುಗೆ
ಹರಿಸ್ಮರಣೆ ಶುಚಿಬೆರೆತ ರುಚಿಯನ್ನದಡುಗೆ
ಶ್ರೀನಿವಾಸ ವಿಠಲನೆಂಬ ಲವಣವಿರದಡುಗೆ
ಹಾಲಹಲದೊಳ ಅಮೃತದ ಅಡುಗೆ (೩)

ನೀ ಮಾಡಿದಡುಗೆಯ ನೀನೇ ಉಣಬೇಕು
ಉಪ್ಪುಖಾರದ ಲೆಕ್ಕ ಶ್ರೀಹರಿಗಿಡಬೇಕು

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೪.೨೦೧೧

Shri Krishnana Nooraru Geethegalu - 086

ಗೋವಿಂದ ಕೃಷ್ಣ ಹರೇ

ಗೋವಿಂದ ಕೃಷ್ಣ ಹರೇ ಹರೇ ಗೋಪಾಲ ಕೃಷ್ಣ ಹರೇ
ವಸುದೇವಸುತ ಶ್ರೀ ದೇವಕಿನಂದನ ಜಗದಾನಂದ ಹರೇ

ಅಚ್ಯುತಾಚಲ ಆದಿತ್ಯಾದ್ಭುತ ಅನಂತ ದೇವ ಹರೇ
ಅಜೇಯಾಜನ್ಮ ಅನಾದಿ ಅಕ್ಷರ ಅಪರಾಜಿತನೆ ಹರೇ (೦೧)

ಶಂಖ ಚಕ್ರ ಗದಾ ಪದ್ಮ ಪೂರ್ಣ ಪುಣ್ಯಾಸ್ತ ಹರೇ
ಪದಕ ಕೌಸ್ತುಭ ವಜ್ರಕಿರೀಟ ಕುಂಡಲಧರನೆ ಹರೇ (೦೨)

ಕಮಲನಯನ ನಿರ್ಮಲವದನ ತಿಲಕಚಂದನ ಹರೇ
ವನಮಾಲಾಧರ ಕೇಯೂರನೆ ಶ್ರೀಹರಿಕೃಷ್ಣ ಹರೇ (೦೩)

ದೇವಾದಿದೇವ ಶ್ರೀದಾನವೇಂದ್ರ ದಯಾನಿಧಿಯೆ ಹರೇ
ದುರಿತಹರ ಶ್ರೀಧರ್ಮಾಧ್ಯಕ್ಷನೆ ದ್ವಾರಕಾಧೀಶ ಹರೇ (೦೪)

ಬಾಲಗೋಪಾಲ ಮೂಜಗಪಾಲ ಶ್ರೀಗೋವರ್ಧನ ಹರೇ
ಜಗನ್ನಾಥ ಜಯಜನಾರ್ಧನ ಜಯಂತ ಜ್ಯೋತಿ ಹರೇ (೦೫)

ಕಂಜಲೋಚನ ಕಮಲನಾಥ ಶ್ರೀಕೇಶವಕೃಷ್ಣ ಹರೇ
ಲಕ್ಷ್ಮೀಕಾಂತ ಲೋಕಾಧ್ಯಕ್ಷನೆ ತ್ರಿಲೋಕರೂಪ ಹರೇ (೦೬)

ಮಧುಸೂದನ ಮದನಮಾಧವ ಮಯೂರಾಧರನೆ ಹರೇ
ಮನೋಹರ ಶ್ರೀಮುರಳೀಧರನೆ ಮಹೇಂದ್ರದೇವ ಹರೇ (೦೭)

ನಿರ್ಗುಣಾದಿ ನಿರಂಜನರೂಪ ನಾರಾಯಣ ದೇವ ಹರೇ
ಪ್ರಜಾಪತಿ ಶ್ರೀಪಾರ್ಥಸಾರಥಿ ಪುಣ್ಯಪುರುಷ ಹರೇ (೦೮)

ಸತ್ಯವಾಚನ ಶ್ಯಾಮಲಸುಂದರ ಸುಶೀಲದೇವ ಹರೇ
ಪನ್ನಗಶಯನ ಶ್ರೀವೈಕುಂಠ ಶ್ರೀನಿವಾಸ ವಿಠಲ ಹರೇ (೦೯)

ಗೋವಿಂದ ಕೃಷ್ಣ ಹರೇ ಹರೇ ಗೋಪಾಲ ಕೃಷ್ಣ ಹರೇ
ವಸುದೇವಸುತ ಶ್ರೀ ದೇವಕಿನಂದನ ಜಗದಾನಂದ ಹರೇ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೪.೨೦೧೧

Sunday, April 24, 2011

Shri Krishnana Nooraru Geethegalu - 085

ವಾಸುದೇವ

ಕಾವನು ನೀನೆಂದೆ ನಂಬಿ ನಿನ್ನನು ಬಂದೆ
ನಿಗಮಗೋಚರ ಕೃಷ್ಣ ವಾಸುದೇವ

ಬುವಿ ನೀನು ಬಾನ ರವಿ ನೀನು ದೊರೆಯೆ
ನೆಲಜಲವು ಜಗಸಕಲ ದೇವದೇವ
ನಿನ್ನೊಲವ ಜೀವದಣುವೆನ್ನಯ ಮೊರೆಯ
ಆಲಿಸೊ ಶ್ರೀಪಾದ ವಾಸುದೇವ (೧)

ಬಿಡದೆ ಬಕುತಿಯೊಳು ಬೇಡುವೆನೊ ಹರಿಯೆ
ಆದಿ ಅನಂತಾತ್ಮ ದೇವದೇವ
ಕರೆತಂದವ ನೀನು ಕಾಯವುದು ಕೊನೆವರೆಗು
ಪ್ರಹ್ಲಾದವರದನೆ ವಾಸುದೇವ (೨)

ಹಲವು ಅವತಾರದೊಲು ಅನಿತು ಜೀವರಿಗೆ
ಇಹಪರದಿ ಪಾಲಿಪನೆ ದೇವದೇವ
ನೆಚ್ಚಿಬಂದೆನೊ ನಿನ್ನ ಶ್ರೀನಿವಾಸ ವಿಠಲಯ್ಯ
ಸಲಹು ಸುಖದೊಳಗೆನ್ನ ವಾಸುದೇವ (೩)

ಕಾವನು ನೀನೆಂದೆ ನಂಬಿ ನಿನ್ನನು ಬಂದೆ
ನಿಗಮಗೋಚರ ಕೃಷ್ಣ ವಾಸುದೇವ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೪.೦೪.೨೦೧೧

Tuesday, April 19, 2011

Shri Krishnana Nooraru Geethegalu - 084

ನಾರಾಯಣ ನಾಮ

ನಾರಾಯಣ ನಿನ್ನ ನಾಮವ ಜಪಿಸಲು
ನಾಲಗೆಯದು ನಲಿದಾಡುವುದು
ಹಲವು ಜನುಮದಿ ನುಡಿದನ್ಯದ ಕರ್ಮ
ಹರಿಯೆ ನಿನ್ನನು ಭಜಿಸೆ ಕಳೆಯುವುದು

ಕೈಕೇಯಿ ದುರ್ನುಡಿಯನ್ನರುವಿ ದಶರಥಗೆ
ಅಯೋಧ್ಯೆರಾಮನ ಅಡವಿಗಟ್ಟಿದ ಕರ್ಮ
ಅಸುರನ ಮೋಹವದು ಹರಿಣಿಯವತಾರದಿ
ಜನಕಸುತೆಯನು ಶೋಕಕೆಳೆಸಿದ ಕರ್ಮ (೧)

ಅಗಸನ ನುಡಿಯವು ಜಗದ ಕರ್ಣದೊಲು
ಅಮರಗೆ ಅನುಮಾನವಾವರಿಸಿ ಕರ್ಮ
ಸಂದೇಹದಗ್ನಿಯು ಅವತಾರಿ ಲಕುಮಿಯನು
ಬುವಿಯ ಬಾಯ್ಗಿಟ್ಟ ಯುಗದ ಕರ್ಮ (೨)

ಸುಳ್ಳು ತಟವಟದೀ ಕಲಿಯೆಂಬೊ ಸಂತೆಯೊಳು
ಮಾನ ಮಂತ್ರದ ಜಪವ ಮರೆತ ಕರ್ಮ
ಶ್ರೀನಿವಾಸ ವಿಠಲನ ಈಗಲಾದರು ಭಜಿಸೆ
ಕಳೆವವೊ ಸಕಲ ಜನುಮದ ಕರ್ಮ (೩)

ನಾರಾಯಣ ನಿನ್ನ ನಾಮವ ಜಪಿಸಲು
ನಾಲಗೆಯದು ನಲಿದಾಡುವುದು
ಹಲವು ಜನುಮದಿ ನುಡಿದನ್ಯದ ಕರ್ಮ
ಹರಿಯೆ ನಿನ್ನನು ಭಜಿಸೆ ಕಳೆಯುವುದು

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೪.೨೦೧೧

Monday, April 18, 2011

Shri Krishnana Nooraru Geethegalu - 083

ಜೋಜೋ ಶ್ರೀಗೋವಿಂದ

ಮಲಗಯ್ಯ ತೂಗುವೆ ಮುದ್ದು ಅರವಿಂದ
ಮಲಗಯ್ಯ ಜೋಜೋ ಶ್ರೀಗೋವಿಂದ

ಮಲಗೊ ಸುಂದರರಾಮ ಮಲಗೊ ನಿರ್ಮಲರಾಮ
ಮಲಗಯ್ಯ ಜೋಜೋ ಪುರುಷೋತ್ತಮ
ಮಲಗೊ ಸೀತಾರಾಮ ಮಲಗೊ ಶಬರಿರಾಮ
ಮಲಗಯ್ಯ ಜೋಜೋ ವಾನರಪ್ರೇಮ (೧)

ಮಲಗೊ ಕಮಲನಯನ ಮಲಗೊ ಚಂದಿರವದನ
ಮಲಗಯ್ಯ ಜೋಜೋ ಮನಮೋಹನ
ಮಲಗೊ ರಾಧಾರಮಣ ಮಲಗೊ ಶ್ಯಾಮಲವರ್ಣ
ಮಲಗಯ್ಯ ಜೋಜೋ ಯದುನಂದನ (೨)

ಮಲಗೊ ಶ್ರೀನಿರಂಜನ ಮಲಗೊ ಶ್ರೀನಾರಾಯಣ
ಮಲಗಯ್ಯ ಜೋಜೋ ಜಗಕಾರಣ
ಮಲಗೊ ತಿರುಮಲೆವಾಸ ಶ್ರೀನಿವಾಸ ವಿಠಲಯ್ಯ
ಮಲಗಯ್ಯ ಜೋಜೋ ಮೂಜಗಕ್ಷೇಮ (೩)

ಮಲಗಯ್ಯ ತೂಗುವೆ ಮುದ್ದು ಅರವಿಂದ
ಮಲಗಯ್ಯ ಜೋಜೋ ಶ್ರೀಗೋವಿಂದ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೮.೦೪.೨೦೧೧

Sunday, April 17, 2011

Shri Krishnana Nooraru Geethegalu - 082

ದೇವ ತಿಮ್ಮಪ್ಪ

ಇವ ದೇವ ತಿಮ್ಮಪ್ಪ ಎಮ್ಮ ಕಾಯುವನಪ್ಪ
ಜಗದಾದಿವಂದ್ಯ ಶ್ರೀ ಭಕ್ತವತ್ಸಲನು

ಶಂಖ ಚಕ್ರ ಗದಾ ಪದ್ಮಹಸ್ತನು
ಕಮಲನಯನ ಹರಿ ಚಂದನ ತಿಲಕನು
ಕೌಸ್ತುಭ ಕೇಯೂರ ವನಮಾಲೆ ಧರಿತನು
ಪ್ರಹ್ಲಾದವರದ ನಾರಾಯಣನು (೧)

ವೇದಪಿತ ಬ್ರಹ್ಮಗೆ ಇವನಾದಿ ಪಿತನು
ದ್ವಾಪರದಿ ದೇವಕಿಯ ಕೃಷ್ಣಯ್ಯ ಸುತನು
ಅಷ್ಟಮಹಿಷಿಯರೊಡೆಯ ಧರಣೀಶನಿವನು
ಪೂತನೆವರದ ಯದುವಂಶಜನು (೨)

ಕಲಿಯೊಳು ದೇವರ ದೇವನೊ ಇವನು
ಹನುಮ-ಭೀಮ-ಶ್ರೀಮಧ್ವರ ರಾಯನು
ಜಗದೊಡೆಯ ಎಮ್ಮ ಶ್ರೀನಿವಾಸ ವಿಠಲನು
ಸೇವಿಪ ಸುಜನರ ಅನುಕ್ಷಣ ಕಾವನು (೩)

ಇವ ದೇವ ತಿಮ್ಮಪ್ಪ ಎಮ್ಮ ಕಾಯುವನಪ್ಪ
ಜಗದಾದಿವಂದ್ಯ ಶ್ರೀ ಭಕ್ತವತ್ಸಲನು

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೪.೨೦೧೧

Saturday, April 16, 2011

Shri Krishnana Nooraru Geethegalu - 081

ಶುಭವರದೆ

ಶುಭವರದೆ ಶ್ರೀ ಶಿವಕರಿ ಭಾಸ್ಕರಿ
ಹರಿವಲ್ಲಭೆ ಜಯೆ ಸುಂದರಿಯೆ
ಪದ್ಮಮಾಲಾಧರೆ ಪುಣ್ಯಹಸ್ತೆಯೆ
ಸುಜನರ ಪೊರೆವಳೆ ಸಿರಿನಿಧಿಯೆ

ಮಂಗಳೆ ಸಿಂಧೂರೆ ಮುತೈದೆ ಮಾಂಗಲ್ಯೆ
ಶ್ರೀ ಧರ್ಮನಿಲಯೆ ಲೋಕಮಾತೆ
ಇಂದುಶೀತಲೆ ದೇವಿ ಆಹ್ಲಾದಜನನಿ
ಸಿದ್ಧಿದಾಯಿನಿ ಸಕಲೆ ಸುಖದಾತೆ (೧)

ಸಾಗರತನಯೆ ಹೇಮಾಮಾಲಿನಿ
ವಸುಪ್ರದೆ ಹರಿಣಿ ನಾರಾಯಣಿ
ದಾರಿದ್ರ್ಯನಾಶಿನಿ ಸಿರಿ ಸಂವರ್ಷಿಣಿ
ಭುವನೇಶ್ವರಿಯೆ ಶ್ರೀ ಕರುಣಿ (೨)

ಮಹಾಲಕ್ಷ್ಮಿ ನಮೊ ವರಲಕ್ಷ್ಮಿ ನಮೊ
ಪದ್ಮಾಕ್ಷೆ ಪ್ರೇಮ ಪುಷ್ಕರಣಿ
ಶ್ರೀನಿವಾಸ ವಿಠಲನ ಸಮಬಲೆ ತಾಯೆ
ಕಾಯೆಮ್ಮ ನಮೊ ಜಗಕಾರಣಿ (೩)

ಶುಭವರದೆ ಶ್ರೀ ಶಿವಕರಿ ಭಾಸ್ಕರಿ
ಹರಿವಲ್ಲಭೆ ಜಯೆ ಸುಂದರಿಯೆ
ಪದ್ಮಮಾಲಾಧರೆ ಪುಣ್ಯಹಸ್ತೆಯೆ
ಸುಜನರ ಪೊರೆವಳೆ ಸಿರಿನಿಧಿಯೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೪.೨೦೧೧

Shri Krishnana Nooraru Geethegalu - 080

ಶ್ರೀನಿಧಿಪಾದ

ಪಾದ ಪಾವನಪಾದ ಶ್ರೀಹರಿ ದಿವ್ಯಪಾದ
ಸುಜನರ ಧರೆಯೊಳು ಕಾವ ಶ್ರೀನಿಧಿಪಾದ

ಕುಲಗೋತ್ರಂಗಳ ಮಡಿ ಸೂತ್ರಂಗಳ
ಗಣಿಸದೆ ಸಲಹುವ ಶುಭಪಾದ
ಸಿರಿಯನೆಣಿಸದೆ ಗುಣಿಗಳ ಗುಣಿಸುವ
ಭಾಗ್ಯದ ಗಣಿಯೊ ಹರಿಪಾದ (೧)

ಕಂದ ಪ್ರಹ್ಲಾದರ ಪಾಂಡವರೈವರ
ಕ್ಷೇಮವನೊಪ್ಪಿದ ಸಿರಿಪಾದ
ಮಾವ ಕಂಸನ ಕಟ್ಟಿ ಬಲಿಯಹಂ ಮೆಟ್ಟಿ
ಅಸುರರನಟ್ಟಿದ ಶ್ರೀಪಾದ (೨)

ಮಾತೆ ಕೌಸಲ್ಯೆಯ ಮಡಿಲೊಳಗಾಡಿದ
ಮುದ್ದು ರಾಮಯ್ಯನ ಪುಣ್ಯಪಾದ
ಪುರಂದರ-ಕನಕಾದಿ ದಾಸರು ಪೊಗಳಿದ
ಶ್ರೀನಿವಾಸ ವಿಠಲ ಧನ್ಯಪಾದ (೩)

ಪಾದ ಪಾವನಪಾದ ಶ್ರೀಹರಿ ದಿವ್ಯಪಾದ
ಸುಜನರ ಧರೆಯೊಳು ಕಾವ ಶ್ರೀನಿಧಿಪಾದ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೦೪.೨೦೧೧

Friday, April 15, 2011

Shri Krishnana Nooraru Geethegalu - 079

ಮಾಯದ ಕುದುರಿ

ಮನಸು ಮಾಯದ ಕುದುರಿ ಶ್ರೀಹರಿ
ನಡೆಸಯ್ಯ ನೀನೇರಿ ಇದರ ಸವಾರಿ
ಕಟ್ಟುಕಟ್ಟಳೆ ಕಿತ್ತು ಅಂಕುಡೊಂಕಿನ ತಿಟ್ಟು
ಹತ್ತಿ ಎತ್ತಲೊ ಕೆಟ್ಟು ಅರಿಯನೊ ದಾರಿ

ದಶಶಿರ ದುರುಳನ ಲಾಯದೊಳಿತ್ತು
ವಂಚಿಸಿ ಸೀತೆಯ ಹೊತ್ತೋಡಿತ್ತು
ಲೋಕದ ನಿಂದೆಯ ನಿಶೆಯೊಳಗಿಟ್ಟು
ರಾಮರ ಅಂಬಿಗೆ ಓಟವ ಕಿತ್ತು (೧)

ಕೌರವ ತೊಡೆಯಲಿ ಕೆನೆದಾಡಿತ್ತು
ಐವಗೆ ಪಗಡೆಯ ಸೋಲಾಗಿತ್ತು
ದುಷ್ಟಗೆ ದ್ರೌಪದಿ ಸೆರಗನು ಕೊಟ್ಟು
ಧರ್ಮಪ್ರಹಾರಕೆ ಹೆದರೋಡಿತ್ತು (೨)

ತ್ರೇತೆಯ ರಾಮಗೆ ಭಯದೊಳಗಿತ್ತು
ಗೋಕುಲ ಕೃಷ್ಣಗೆ ಬಕುತಿಯೊಳಿತ್ತು
ಕಲಿಯೊಳು ಶ್ರೀನಿವಾಸ ವಿಠಲ ಸವಾರನ
ಶ್ರೀಪಾದವನೊಪ್ಪಿ ಶರಣಾಗಿತ್ತು (೩)

ಮನಸು ಮಾಯದ ಕುದುರಿ ಶ್ರೀಹರಿ
ನಡೆಸಯ್ಯ ನೀನೇರಿ ಇದರ ಸವಾರಿ
ಕಟ್ಟುಕಟ್ಟಳೆ ಕಿತ್ತು ಅಂಕುಡೊಂಕಿನ ತಿಟ್ಟು
ಹತ್ತಿ ಎತ್ತಲೊ ಕೆಟ್ಟು ಅರಿಯನೊ ದಾರಿ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೦೪.೨೦೧೧

Wednesday, April 13, 2011

Shri Krishnana Nooraru Geethegalu - 078


ನಮೊ ವೇಂಕಟೇಶಾಯ


ನಮೊ ವೇಂಕಟೇಶಾಯ ಶೇಷಾದ್ರಿ ನಿಲಯ
ವಾಸುದೇವಾಯ ಅನಂತಚರಣ

ನಮೊ ನಿರಂಜನಾಯ ನೀಲಾದ್ರಿ ನಿಲಯ
ಶ್ರೀನಿವಾಸಾಯ ನಾರಾಯಣ

ನಮೊ ಭವಹರಾಯ ಭದ್ರಾಚಲ ನಿಲಯ
ಪದ್ಮನಾಭಾಯ ಪರಿಪೂರ್ಣ

ನಮೊ ಸರ್ವೇಶಾಯ ಸಿಂಹಾಚಲ ನಿಲಯ
ರಾಮಚಂದ್ರಾಯ ದಯಾಕರುಣ

ನಮೊ ತ್ರಿವಿಕ್ರಮಾಯ ತ್ರಿಪುರಾಚಲ ನಿಲಯ
ಪರಶುರಾಮಾಯ ಪಾಪಹರಣ

ನಮೊ ವಿಶ್ವಾತ್ಮಾಯ ವೃಷಭಾಚಲ ನಿಲಯ
ದಾಮೋದರಾಯ ಧರ್ಮಗುಣ

ನಮೊ ಸನಾತನಾಯ ಶ್ರೀಶೈಲಾಚಲ ನಿಲಯ
ಹೃಷಿಕೇಶಾಯ ಸಿರಿರಮಣ

ನಮೊ ಕಮಲನಾಥಾಯ ಕ್ಷೀರಾಬ್ಧಿ ನಿಲಯ
ವರಪ್ರದಾಯ ಸುಜನಪ್ರಾಣ

ನಮೊ ಗೋವಿಂದಾಯ ಗೋಕುಲ ನಿಲಯ
ಗೋಪನಂದಾಯ ಮನಮೋಹನ

ನಮೊ ವಿಷ್ಣುದೇವಾಯ ವೈಕುಂಠ ನಿಲಯ
ದಶರೂಪಾಯ ಗೋವರ್ಧನ

ನಮೊ ವಿಶ್ವರೂಪಾಯ ವರಾಹಚಲ ನಿಲಯ
ಶ್ರೀನಿವಾಸ ವಿಠಲಾಯ ಜನಾರ್ಧನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೪.೦೪.೨೦೧೧

Shri Krishnana Nooraru Geethegalu - 077

ನಮೊ ನಾರಾಯಣ

ಓಂ ನಮೊ ನಾರಾಯಣ
ಶ್ರೀ ಶುಭಗುಣ ಲೋಕಕಲ್ಯಾಣ

ಓಂ ನಮೊ ನಾರಾಯಣ
ಪಾವನ ಕರುಣ ವಾಮನ ಶ್ರೀಚರಣ

ಓಂ ನಮೊ ನಾರಾಯಣ
ಸಕಲ ಸದ್ಗುಣ ಪುಣ್ಯಯಮುನಾ

ಓಂ ನಮೊ ನಾರಾಯಣ
ಸತ್ಚರಿತ ಸುಗುಣ ಚರಾಚರ ಕಾರಣ

ಓಂ ನಮೊ ನಾರಾಯಣ
ಕಮಲನಯನ ಸುಂದರ ವದನ

ಓಂ ನಮೊ ನಾರಾಯಣ
ಮನಮೋಹನ ಮೂನಾಮ ಚಂದನ

ಓಂ ನಮೊ ನಾರಾಯಣ
ಆದಿ ಸನಾತನ ಸೂರ್ಯಲೋಚನ

ಓಂ ನಮೊ ನಾರಾಯಣ
ಸುಮುಖ ಸತ್ದರ್ಶನ ಸುದರ್ಶನ

ಓಂ ನಮೊ ನಾರಾಯಣ
ಜೀವಜಾಲ ಪಾಲನ ಜನಾರ್ಧನ

ಓಂ ನಮೊ ನಾರಾಯಣ
ಶ್ರೀನಿವಾಸ ವಿಠಲ ವಸುನಂದನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೩.೦೪.೨೦೧೧

Monday, April 11, 2011

Shri Krishnana Nooraru Geethegalu - 076

ನಂಬಿ ಭಜಿಸಿರೊ

ನಂಬಿ ಭಜಿಸಿರೊ ಇವನ ನೆಚ್ಚಿ ಭಜಿಸಿರೊ ಇವನ
ತ್ರೇತೆಯಿಂ ಕಲಿವರೆಗು ಧರೆ ಕಾಯ್ದ ಶ್ರೀಧರನ

ರಾಮ ರಾಮಯೆನಲು ಎದೆಯೊಕ್ಕು ಕೂತವನ
ಬಕುತಿಯಿಂ ಬಾ ಎನಲು ಶಬರಿಗೊಲಿದವನ
ಶಿಲೆಯಾದಹಲ್ಯೆಯ ಶಾಪ ಪರಿಹಾರಕನ
ಕೌಸಲ್ಯೆ ಕಂದನ ಪಿತವಾಕ್ಯ ಪಾಲಕನ (೧)

ಹರಿ ನೀನೆ ಗತಿಯೆನಲು ಕರಿಯ ಕಾಯ್ದವನ
ನಾರಾಯಣನೆನಲು ನರಸಿಂಹನಾದವನ
ಅಬಲೆಯಾರ್ತದ ಮೊರೆಗೆ ವಸ್ತ್ರದಕ್ಷಯನ
ಯಶೋದೆ ಕಂದ ಶ್ರೀ ದ್ವಾರಕಾನಂದನ (೨)

ಸಲಹೊ ಶ್ರೀನಿಧಿಯೆನಲು ಬಿಡದೆ ಬೆನ್ನಾದನ
ವೈಕುಂಠಪತಿಯೆಮ್ಮ ಶ್ರೀನಿವಾಸ ವಿಠಲ
ಕರುಣಿಪನೊ ಭಜಿಪರಿಗೆ ಸುಕೃತವು ಸನ್ಮಾನ
ಕಳೆದಲವು ಜನುಮದ ಅಕ್ಷಮ್ಯದಪಮಾನ (೩)

ನಂಬಿ ಭಜಿಸಿರೊ ಇವನ ನೆಚ್ಚಿ ಭಜಿಸಿರೊ ಇವನ
ತ್ರೇತೆಯಿಂ ಕಲಿವರೆಗು ಧರೆ ಕಾಯ್ದ ಶ್ರೀಧರನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೧.೦೪.೨೦೧೧

Sunday, April 10, 2011

Shri Krishnana Nooraru Geethegalu - 075

ಕನಕಗೊಲಿದನೆ ಕೃಷ್ಣ

ಕನಕಗೊಲಿದನೆ ಕೃಷ್ಣ ಆಲಿಸೆನ್ನೆಯ ಮೊರೆಯ
ಪಾಮರರ ಪಾಲಿಪನೆ ವಾಸುದೇವ

ಆವುದಾದಿಯೊ ಅರಿಯೆ ಅಂತ್ಯವೆಲ್ಲಿಯೊ ಅರಿಯೆ
ಬಲ್ಲಿದನೆ ನಡುವೆ ನೀ ನಡೆಸಬೇಕೊ
ಕಾಯ ನಿನ್ನದು ಹರಿಯೆ ಮೋಹವೆಂದರೂ ಹರಿಯೆ
ಹೃದಯ ಸತ್ಯದಿ ನೀ ನುಡಿಸಬೇಕೊ (೧)

ಆದಿಬ್ರಹ್ಮನೆ ಹರಿಯೆ ಆವ ಶಾಸ್ತ್ರವನರಿಯೆ
ನಿನ್ನುದುರದೊಳಗೆನ್ನ ಕಾಯಬೇಕೊ
ಕುಲಗೋತ್ರ ಸೂತ್ರವದ ಅರಿಯೆ ಗೋಕುಲನೆ
ಮಾನಜನರೊಳಗೆನ್ನ ಸಲಹಬೇಕೊ (೨)

ನಿನ್ನ ಸೃಷ್ಠಿಯೊ ಹರಿಯೆ ನಿನ್ನ ಬಿಟ್ಟಿರಲರಿಯೆ
ಶ್ರೀಪಾದ ಸನಿಹದ ಕರುಣೆ ಬೇಕೊ
ಶ್ರೀನಿವಾಸ ವಿಠಲನೆ ಕಿಂಡುಡುಪಿ ಕೃಷ್ಣಯ್ಯ
ನಿನ್ನ ರಕ್ಷೆಯು ನಿರತವೆನಗೆ ಬೇಕೊ (೩)

ಕನಕಗೊಲಿದನೆ ಕೃಷ್ಣ ಆಲಿಸೆನ್ನೆಯ ಮೊರೆಯ
ಪಾಮರರ ಪಾಲಿಪನೆ ವಾಸುದೇವ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೦.೦೪.೨೦೧೧

Friday, April 8, 2011

Shri Krishnana Nooraru Geethegalu - 074

ಕರುಣಿಸೊ ಶ್ರೀರಾಮ

ಕರುಣಿಸೊ ಶ್ರೀರಾಮ ನೀಲಶ್ಯಾಮ
ಕೌಸಲ್ಯೆಯಾನಂದ ಸುಗುಣಧಾಮ
ಆದಿಪುರುಷನೆ ರಾಮ ಶುದ್ಧಪರುಷನೆ ರಾಮ
ಕರುಣಿಸೈ ಜಯಜಯ ಕೋದಂಡರಾಮ

ಪೂರ್ಣಚಂದಿರ ವದನ ನೀನಯ್ಯ ರಾಮ
ರಾಜೀವಲೋಚನ ರಘುವಂಶಜ
ಮೂತಿಲಕ ಚಂದನನು ನೀನಯ್ಯ ಶ್ರೀರಾಮ
ಧನುರ್ಧಾರಿ ನೀ ಮಹಾಭುಜ (೧)

ವಾಲ್ಮೀಖಿ ಪ್ರಾಣಾತ್ಮ ನೀನಯ್ಯ ರಾಮ
ಪುರಾಣ ಪ್ರಥಮ ಪುರುಷೋತ್ತಮ
ಹನುಮಗಾಶ್ರಯನು ನೀನಯ್ಯ ಶ್ರೀರಾಮ
ಶಬರಿಗೊಲಿದನೆ ಸರ್ವೋತ್ತಮ (೨)

ದ್ವಾರಕೆಯ ಕೃಷ್ಣನು ನೀನಯ್ಯ ರಾಮ
ಗೋಕುಲದ ಗೋಪಾಲ ದಿವ್ಯನಾಮ
ಶ್ರೀನಿವಾಸ ವಿಠಲನು ನೀನಯ್ಯ ಶ್ರೀರಾಮ
ಸುಜನರ ಪೊರೆವನೆ ಜೀವಕಾಮ (೩)

ಕರುಣಿಸೊ ಶ್ರೀರಾಮ ನೀಲಶ್ಯಾಮ
ಕೌಸಲ್ಯೆಯಾನಂದ ಸುಗುಣಧಾಮ
ಆದಿಪುರುಷನೆ ರಾಮ ಶುದ್ಧಪರುಷನೆ ರಾಮ
ಕರುಣಿಸೈ ಜಯಜಯ ಕೋದಂಡರಾಮ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೪.೨೦೧೧

Thursday, April 7, 2011

Shri Krishnana Nooraru Geethegalu - 073

ದಶರಥ ಪ್ರೇಮ

ನಾಮ ನುಡಿವುದೆ ಪಾವನ ಶ್ರೀರಾಮ ಧ್ಯಾನವೆ ಜೀವನ
ಉತ್ತಮ ಶ್ರೀಪುರುಷೋತ್ತಮ ಮುಕುತಿಪಥಕೆ ಸಾಧನ

ರಾಮ ರಾಮ ರಾಮನೆನಲು ಜಗದ ತುಂಬ ಕ್ಷೇಮ
ಅಣುರೇಣು ಕಣಕಣದೊಲು ನಲಿವ ಸುಖದಾರಾಮ
ಧರ್ಮ ಕಾಯ್ವ ಧರೆಯ ಕಾಯ್ವ ಧರಣೀಶ್ವರ ರಾಮ
ರಾಮನೆನುವ ನರರ ಕಾಯ್ವ ದಶರಥನ ಪ್ರೇಮ (೧)

ರಾಮ ರಾಮ ರಾಮನೆನಲು ಪೊರೆವ ಶಬರಿರಾಮ
ವಿಭೀಷಣಗೆ ಅರಸು ಪಟ್ಟವು ಪಟ್ಟಾಭಿರಾಮ
ರಾವಣಾಸುರ ಗರ್ವ ಮೆಟ್ಟಿದ ಧನುರ್ಧಾರಿ ರಾಮ
ಬಿಡದೆ ಧ್ಯಾನಿಪ ಸುಜನವತ್ಸಲ ಶ್ಯಾಮಲ ಶ್ರೀರಾಮ (೨)

ರಾಮ ರಾಮ ರಾಮನೆನಲು ಸಲುಹಿ ತ್ರೇತಾರಾಮ
ದ್ವಾಪರದೆ ಧರ್ಮಪಾಲನ ಗೋಪನಂದನ ರಾಮ
ಶ್ರೀನಿವಾಸ ವಿಠಲ ಕಲಿಯೊಳು ದಶರೂಪನು ರಾಮ
ಪಾಪಹಾರ ಪುಣ್ಯದಾಯ ಹನುಮನ ಶ್ರೀರಾಮ (೩)

ನಾಮ ನುಡಿವುದೆ ಪಾವನ ಶ್ರೀರಾಮ ಧ್ಯಾನವೆ ಜೀವನ
ಉತ್ತಮ ಶ್ರೀಪುರುಷೋತ್ತಮ ಮುಕುತಿಪಥಕೆ ಸಾಧನ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೮.೦೪.೨೦೧೧

Monday, April 4, 2011

Shri Krishnana Nooraru Geethegalu - 072

ಸುಗುಣಧಾಮ

ರಾಮ ಜಯಜಯ ರಾಮ ಸುಗುಣಧಾಮ
ಪುಣ್ಯಚರಿತನೆ ರಾಮ ಪುರುಷೋತ್ತಮ

ಪರಬ್ರಹ್ಮ ಪರಮಾತ್ಮ ಪರಂಜ್ಯೋತಿ ರಾಮ
ಪ್ರೇಮಮೂರುತಿ ಪುರುಷ ವಿಶೇಷ ರಾಮ
ಕಲ್ಯಾಣ ಶುಭಗುಣನು ರಘುವಂಶಜ ಸೋಮ
ಪಿತವಾಕ್ಯ ಪರಿಪಾಲ ಪ್ರಥಮ ರಾಮ (೧)

ಬಲಿಪ್ರಮಥ ಖರಹತ ತಾಟಕಾಂತಕ ರಾಮ
ಲಂಕನ ದಶಗರ್ವ ಮುರಿದನೆ ರಾಮ
ಅಹಲ್ಯಾ ಶಾಪಹರ ಹನುಮಕುಲ ಕ್ಷೇಮ
ವಿಭೀಷಣ ಪ್ರಿಯನೆ ಕೋದಂಡರಾಮ (೨)

ಜಯತುಜಯ ಜನಾರ್ಧನ ಜಾನಕೀರಾಮ
ದ್ವಾಪರದೆ ಗೋಕುಲವ ಕಾಯ್ದ ಶ್ಯಾಮ
ದಶದೊಳಗೆ ಧರೆಪಾಲ ಸುಜನಕುಲ ಪ್ರೇಮ
ಶ್ರೀನಿವಾಸ ವಿಠಲನೆ ಕೌಸಲ್ಯೆ ರಾಮ (೩)

ರಾಮ ಜಯಜಯ ರಾಮ ಸುಗುಣಧಾಮ
ಪುಣ್ಯಚರಿತನೆ ರಾಮ ಪುರುಷೋತ್ತಮ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೫.೦೪.೨೦೧೧

Sunday, April 3, 2011

Shri Krishnana Nooraru Geethegalu - 071


ನಾದ ಯಮುನೆ


ನುಡಿಸು ಮುರಳಿಯನು ವನಮಾಲಿ
ಬರಲಿ ಒಲುಮೆಯ ರಾಗ ಎದೆಗೆ ತೇಲಿ
ಸರ್ವಗಂಧನ ಪರುಷ ಸುಗುಣವದು ಸೇರಿ
ಗೋಕುಲದ ಹಾದಿಯಲಿ ನಲಿದು ತಂಗಾಳಿ

ಬುವಿಯು ಬಸುರಾಗಿ ಬೀಜದೊಳ ಕಣ್ಣರಳಿ
ಹಸಿರು ಜೀವದ ಉಸಿರು ನೀನು ಹರಿಯೆ
ಹಸಿರಿನೊಳಗಿನ ಮೊಗ್ಗು ನಾನೊಂದು ಹೂವಾಗಿ
ನಿನ್ನ ಶ್ರೀಪಾದದೊಳು ಇರುವೆ ದೊರೆಯೆ (೧)

ಎದೆಯಿಂದಲೆದೆಗೆ ಕೃತದಿಂದ ಕಲಿಯೆಡೆಗೆ
ಸತತ ನಾದದ ಯಮುನೆ ಹರಿಯುತಿರಲಿ
ನಿಲಿಸದಿರೊ ಮುರಳಿಯನು ಶ್ರೀನಿವಾಸ ವಿಠಲನೆ
ಸಲಹೊ ಪ್ರೀತಿಯ ಒರತೆ ಬತ್ತದಿರಲಿ (೨)

ನುಡಿಸು ಮುರಳಿಯನು ವನಮಾಲಿ
ಬರಲಿ ಒಲುಮೆಯ ರಾಗ ಎದೆಗೆ ತೇಲಿ
ಸರ್ವಗಂಧನ ಪರುಷ ಸುಗುಣವದು ಸೇರಿ
ಗೋಕುಲದ ಹಾದಿಯಲಿ ನಲಿದು ತಂಗಾಳಿ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೪.೨೦೧೧


Shri Krishnana Nooraru Geethegalu - 070

ಕರುಣಿ ಮಾಧವ

ಪಾಲಿಸೆಂದು ಪಾದವನು ಪಿಡಿಯೆ ಕೇಶವನೆ
ಕಾಯದಿರುವೆಯ ನೀನು ಕರುಣಿ ಮಾಧವನೆ

ಕೃತವಾಯ್ತು ತ್ರೇತೆಯು ತ್ರೇತೆ ದ್ವಾಪರವು
ದ್ವಾಪರದ ಸಂಜೆಯಲಿ ಕಲಿಯ ಉದಯ
ಅಂದಿನಿಂದೀ ಕ್ಷಣಕು ಹಲವು ಜನುಮವನೊಕ್ಕು
ನಂಬಿ ಬಂದೆನೊ ಹರಿಯೆ ನಿನ್ನ ಚರಣ (೧)

ಜಗದ ವ್ಯಾಪಾರವದ ಹಲವು ಅವತಾರದೊಲು
ತೂಕದಲಿ ಸಮವಿರಿಸಿ ಕಾಯುತಿರುವೆ
ಅಣುರೇಣು ಜೀವರಿಗೆ ಅರೆಗಳಿಗೆ ಬಿಡುವಿರದೆ
ಹನಿ-ಅನ್ನವನ್ನಿಟ್ಟು ಸಲಹುತಿರುವೆ (೨)

ಕೃತದೊಳಗೆ ಮೀನಾದೆ ತ್ರೇತೆಯೊಲು ರಾಮಯ್ಯ
ಗೋಕುಲದಿ ಗೋಪಾಲ ಕಾಯ್ವೆನೆಂದೆ
ಬೇಡುವೆನೊ ಕಲಿಯೊಳಗೆ ಕೊನೆಯ ಕ್ಷಣವಿರುವನಕ
ಕಾಯೋ ನೀ ಶ್ರೀನಿವಾಸ ವಿಠಲ ತಂದೆ (೩)

ಪಾಲಿಸೆಂದು ಪಾದವನು ಪಿಡಿಯೆ ಕೇಶವನೆ
ಕಾಯದಿರುವೆಯ ನೀನು ಕರುಣಿ ಮಾಧವನೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೪.೨೦೧೧