Saturday, April 30, 2011

Shri Krishnana Nooraru Geethegalu - 089

ಕಾಯಬೇಕೊ ದೀನ ನಾ

ಪಾಂಡುರಂಗ ನಿನ್ನ ಸಂಗಯಿರಲೆನಗೆ ಅನುಕ್ಷಣ
ಭಕ್ತವತ್ಸಲ ಕೃಷ್ಣ ಕಾಯಬೇಕೊ ದೀನ ನಾ

ಕಂಸಕತ್ತಲೊಳುದಿಸಿ ಗೋಕುಲದಿ ನೆಲೆಸಿ
ಅಬ್ಬರಿಸಿದಸುರರಹಂ ಮೆಟ್ಟಿ ಸಂಹರಿಸಿ
ಶುದ್ಧಾಂತರಂಗದೊಳು ಶ್ರೀರಂಗ ಗತಿಯೆನಲು
ಉದ್ಧರಿಸಿ ಸಲಹುವನೆ ಬಿಡದೆ ಕಾಯೆನ್ನ (೧)

ಆಚಾರ ಸುವಿಚಾರದಾಳವರಿಯೆನೊ ಹರಿಯೆ
ನಿನ್ನ ಶ್ರೀನಾಮದುಚ್ಛಾರದೊರತು
ಎನ್ನಂತರಂಗದೊಳು ಹೊಕ್ಕಾರು ದೈತ್ಯರನು
ದೂರಟ್ಟಿ ಜಗಜಟ್ಟಿ ಬಿಡದೆ ಕಾಯೆನ್ನ (೨)

ಆದಿಯೊಳು ಜಲರೂಪ ಕೃತದೊಳಗೆ ಮತ್ಸ್ಯ
ತ್ರೇತೆಯೊಳು ಶ್ರೀರಾಮ ಗೋಕುಲದ ಕೃಷ್ಣ
ಕಲಿಯೊಳಗೆ ವೇಂಕಟೇಶ ಶ್ರೀನಿವಾಸ ವಿಠಲಯ್ಯ
ನೆಚ್ಚಿ ಬಂದಿಹೆ ನಿನ್ನ ಬಿಡದೆ ಕಾಯೆನ್ನ (೩)

ಪಾಂಡುರಂಗ ನಿನ್ನ ಸಂಗಯಿರಲೆನಗೆ ಅನುಕ್ಷಣ
ಭಕ್ತವತ್ಸಲ ಕೃಷ್ಣ ಕಾಯಬೇಕೊ ದೀನ ನಾ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೧.೦೫.೨೦೧೧

No comments:

Post a Comment