ನೀ ಮಾಡಿದಡುಗೆ
ನೀ ಮಾಡಿದಡುಗೆಯ ನೀನೇ ಉಣಬೇಕು
ಉಪ್ಪುಖಾರದ ಲೆಕ್ಕ ಶ್ರೀಹರಿಗಿಡಬೇಕು
ಧರ್ಮವ ಮರೆತಯ್ಯೋ ಅಧರ್ಮ ಬೆರೆತಡುಗೆ
ಕದ್ದಾಡಿ ಕನಕವ ಕಾಯ್ದಿಟ್ಟ ಅಡುಗೆ
ಅನ್ಯರ ಹೀನದೊಳಾಡಿ ಅಬ್ಬರದಹಂ ಅಡುಗೆ
ಶ್ರೀಹರಿಯೊಪ್ಪದ ಸಪ್ಪಾದ ಅಡುಗೆ (೧)
ಬಕುತಿಯ ಮರೆತಯ್ಯೋ ಶಕುತಿ ಮೆರೆದಡುಗೆ
ಹೆಣ್ಣು ಮಣ್ಣಿನ ಮೋಹ ಮದವೇರಿದಡುಗೆ
ತ್ರೇತೆಯಿಂ ಕಲಿವರೆಗೂ ಕುಣಿದ ಕೇಕೆಯ ಅಡುಗೆ
ದ್ವಾಪರದಿ ಕೇಶವನು ಕೆಣಕಿ ಕೆಟ್ಟಡುಗೆ (೨)
ಮನಶುದ್ಧ ಪಾತ್ರೆಯಲಿ ಮಾಡಬೇಕೊ ಅಡುಗೆ
ಹರಿಸ್ಮರಣೆ ಶುಚಿಬೆರೆತ ರುಚಿಯನ್ನದಡುಗೆ
ಶ್ರೀನಿವಾಸ ವಿಠಲನೆಂಬ ಲವಣವಿರದಡುಗೆ
ಹಾಲಹಲದೊಳ ಅಮೃತದ ಅಡುಗೆ (೩)
ನೀ ಮಾಡಿದಡುಗೆಯ ನೀನೇ ಉಣಬೇಕು
ಉಪ್ಪುಖಾರದ ಲೆಕ್ಕ ಶ್ರೀಹರಿಗಿಡಬೇಕು
ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೬.೦೪.೨೦೧೧
No comments:
Post a Comment