Friday, April 15, 2011

Shri Krishnana Nooraru Geethegalu - 079

ಮಾಯದ ಕುದುರಿ

ಮನಸು ಮಾಯದ ಕುದುರಿ ಶ್ರೀಹರಿ
ನಡೆಸಯ್ಯ ನೀನೇರಿ ಇದರ ಸವಾರಿ
ಕಟ್ಟುಕಟ್ಟಳೆ ಕಿತ್ತು ಅಂಕುಡೊಂಕಿನ ತಿಟ್ಟು
ಹತ್ತಿ ಎತ್ತಲೊ ಕೆಟ್ಟು ಅರಿಯನೊ ದಾರಿ

ದಶಶಿರ ದುರುಳನ ಲಾಯದೊಳಿತ್ತು
ವಂಚಿಸಿ ಸೀತೆಯ ಹೊತ್ತೋಡಿತ್ತು
ಲೋಕದ ನಿಂದೆಯ ನಿಶೆಯೊಳಗಿಟ್ಟು
ರಾಮರ ಅಂಬಿಗೆ ಓಟವ ಕಿತ್ತು (೧)

ಕೌರವ ತೊಡೆಯಲಿ ಕೆನೆದಾಡಿತ್ತು
ಐವಗೆ ಪಗಡೆಯ ಸೋಲಾಗಿತ್ತು
ದುಷ್ಟಗೆ ದ್ರೌಪದಿ ಸೆರಗನು ಕೊಟ್ಟು
ಧರ್ಮಪ್ರಹಾರಕೆ ಹೆದರೋಡಿತ್ತು (೨)

ತ್ರೇತೆಯ ರಾಮಗೆ ಭಯದೊಳಗಿತ್ತು
ಗೋಕುಲ ಕೃಷ್ಣಗೆ ಬಕುತಿಯೊಳಿತ್ತು
ಕಲಿಯೊಳು ಶ್ರೀನಿವಾಸ ವಿಠಲ ಸವಾರನ
ಶ್ರೀಪಾದವನೊಪ್ಪಿ ಶರಣಾಗಿತ್ತು (೩)

ಮನಸು ಮಾಯದ ಕುದುರಿ ಶ್ರೀಹರಿ
ನಡೆಸಯ್ಯ ನೀನೇರಿ ಇದರ ಸವಾರಿ
ಕಟ್ಟುಕಟ್ಟಳೆ ಕಿತ್ತು ಅಂಕುಡೊಂಕಿನ ತಿಟ್ಟು
ಹತ್ತಿ ಎತ್ತಲೊ ಕೆಟ್ಟು ಅರಿಯನೊ ದಾರಿ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೦೪.೨೦೧೧

No comments:

Post a Comment