ನಾದ ಯಮುನೆ
ನುಡಿಸು ಮುರಳಿಯನು ವನಮಾಲಿ
ಬರಲಿ ಒಲುಮೆಯ ರಾಗ ಎದೆಗೆ ತೇಲಿ
ಸರ್ವಗಂಧನ ಪರುಷ ಸುಗುಣವದು ಸೇರಿ
ಗೋಕುಲದ ಹಾದಿಯಲಿ ನಲಿದು ತಂಗಾಳಿ
ಬುವಿಯು ಬಸುರಾಗಿ ಬೀಜದೊಳ ಕಣ್ಣರಳಿ
ಹಸಿರು ಜೀವದ ಉಸಿರು ನೀನು ಹರಿಯೆ
ಹಸಿರಿನೊಳಗಿನ ಮೊಗ್ಗು ನಾನೊಂದು ಹೂವಾಗಿ
ನಿನ್ನ ಶ್ರೀಪಾದದೊಳು ಇರುವೆ ದೊರೆಯೆ (೧)
ಎದೆಯಿಂದಲೆದೆಗೆ ಕೃತದಿಂದ ಕಲಿಯೆಡೆಗೆ
ಸತತ ನಾದದ ಯಮುನೆ ಹರಿಯುತಿರಲಿ
ನಿಲಿಸದಿರೊ ಮುರಳಿಯನು ಶ್ರೀನಿವಾಸ ವಿಠಲನೆ
ಸಲಹೊ ಪ್ರೀತಿಯ ಒರತೆ ಬತ್ತದಿರಲಿ (೨)
ನುಡಿಸು ಮುರಳಿಯನು ವನಮಾಲಿ
ಬರಲಿ ಒಲುಮೆಯ ರಾಗ ಎದೆಗೆ ತೇಲಿ
ಸರ್ವಗಂಧನ ಪರುಷ ಸುಗುಣವದು ಸೇರಿ
ಗೋಕುಲದ ಹಾದಿಯಲಿ ನಲಿದು ತಂಗಾಳಿ
ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೩.೦೪.೨೦೧೧
No comments:
Post a Comment