Tuesday, April 19, 2011

Shri Krishnana Nooraru Geethegalu - 084

ನಾರಾಯಣ ನಾಮ

ನಾರಾಯಣ ನಿನ್ನ ನಾಮವ ಜಪಿಸಲು
ನಾಲಗೆಯದು ನಲಿದಾಡುವುದು
ಹಲವು ಜನುಮದಿ ನುಡಿದನ್ಯದ ಕರ್ಮ
ಹರಿಯೆ ನಿನ್ನನು ಭಜಿಸೆ ಕಳೆಯುವುದು

ಕೈಕೇಯಿ ದುರ್ನುಡಿಯನ್ನರುವಿ ದಶರಥಗೆ
ಅಯೋಧ್ಯೆರಾಮನ ಅಡವಿಗಟ್ಟಿದ ಕರ್ಮ
ಅಸುರನ ಮೋಹವದು ಹರಿಣಿಯವತಾರದಿ
ಜನಕಸುತೆಯನು ಶೋಕಕೆಳೆಸಿದ ಕರ್ಮ (೧)

ಅಗಸನ ನುಡಿಯವು ಜಗದ ಕರ್ಣದೊಲು
ಅಮರಗೆ ಅನುಮಾನವಾವರಿಸಿ ಕರ್ಮ
ಸಂದೇಹದಗ್ನಿಯು ಅವತಾರಿ ಲಕುಮಿಯನು
ಬುವಿಯ ಬಾಯ್ಗಿಟ್ಟ ಯುಗದ ಕರ್ಮ (೨)

ಸುಳ್ಳು ತಟವಟದೀ ಕಲಿಯೆಂಬೊ ಸಂತೆಯೊಳು
ಮಾನ ಮಂತ್ರದ ಜಪವ ಮರೆತ ಕರ್ಮ
ಶ್ರೀನಿವಾಸ ವಿಠಲನ ಈಗಲಾದರು ಭಜಿಸೆ
ಕಳೆವವೊ ಸಕಲ ಜನುಮದ ಕರ್ಮ (೩)

ನಾರಾಯಣ ನಿನ್ನ ನಾಮವ ಜಪಿಸಲು
ನಾಲಗೆಯದು ನಲಿದಾಡುವುದು
ಹಲವು ಜನುಮದಿ ನುಡಿದನ್ಯದ ಕರ್ಮ
ಹರಿಯೆ ನಿನ್ನನು ಭಜಿಸೆ ಕಳೆಯುವುದು

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೪.೨೦೧೧

No comments:

Post a Comment