Sunday, September 16, 2012

Shri Krishnana Nooraru Geethegalu - 292

ಎಂದು ಬರುವೆಯೊ

ಎಂದು ಬರುವೆಯೊ ಇಂದಿರೆರಮಣ ಎನ್ನ ನೋಡಲು
ಜೀವವೆನದು ಕಾಯುತಿಹುದೊ ನಿನ್ನ ಕಾಣಲು

ರಾಮನಂದದಿ ಬರುವೆನೆಂದರೆ ಶಬರಿಯಾಗಿ ಕಾವೆನು
ನೀನಲ್ಲದೆ ಅರಿವರಾರೊ ಶಿಲೆಯೊಳಗಿನ ನೋವನು
ದಶಶಿರನು ನಾನಾಗುವೆ ಕೊಲುವೆಯೆಂದರೆ ರಾಮನೆ
ಕೊಲುವ ಮೊದಲು ಶ್ರೀಚರಣವ ತೋರೊ ಎನ್ನ ಪ್ರಾಣನೆ (೧)

ಕೃಷ್ಣರೂಪದಿ ಬರುವೆಯಾದರೆ ಕುರುಜನಾಗಿ ನಿಲುವೆನು
ಸಮರಧರೆಯೊಳು ಕಂಡು ದೇವನೆ ಧನ್ಯ ಧನ್ಯ ಎನುವೆನು
ಬೇಡವೆನದಿರೊ ಹನುಮನಾಗಿ ನಿನ್ನ ಚರಣದಿ ಇರುವೆನು
ಶ್ರೀನಿವಾಸ ವಿಠಲನಲ್ಲದೆ ಆವ ದೇವರ ಅರಿಯೆನು (೨)

ಎಂದು ಬರುವೆಯೊ ಇಂದಿರೆರಮಣ ಎನ್ನ ನೋಡಲು
ಜೀವವೆನದು ಕಾಯುತಿಹುದೊ ನಿನ್ನ ಕಾಣಲು

                           ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೦೯.೨೦೧೨

No comments:

Post a Comment