Tuesday, September 18, 2012

Shri Krishnana Nooraru Geethegalu - 294

ಬಾರೊ ನಮ್ಮ ಮನೆಗೆ

ಚೆಂಡುಬುಗುರಿ ಆಡೊ ಚೆಲುವ ಕೃಷ್ಣಯ್ಯ ಬಾರೊ ನಮ್ಮ ಮನೆಗೆ
ಗೋಪಿ-ನಂದನು ಕಂಡು ಕೋಪಗೊಳ್ಳರೆ ಕೃಷ್ಣ ಬಾರೊ ನಮ್ಮ ಮನೆಗೆ

ನಿನ್ನ ಮುದ್ದಿನ ಮೈಯ್ಯ ಮುದ್ದಾಡಿ ತೊಳೆಯುವೆ ನೊಸಲಿಗೆ ಶ್ರೀತಿಲಕ
ಕಿರುನಗೆ ಸೂಸುವ ನಿನ್ನಯ ಅಧರಕೆ ಸಂಜೆಯ ರವಿವುದಕ
ಪಟ್ಟೆಪೀತಾಂಬರ ಉಡಿಸುವೆ ದೊರೆಯೆ ಕೊರಳಿಗೆ ಮಣಿಪದಕ
ಕೇಶದಿ ಗರಿಯು ಕಾಲೊಳು ಕಿರುಗೆಜ್ಜೆ ನಲಿಯೊ ಜಗಜನಕ (೧)

ಚುಕ್ಕೆಚಂದ್ರನ ತೋರಿ ತೂಗುಮಂಚದಿ ನಿನ್ನ ತೂಗುವೆ ಶ್ರೀಹರಿಯೆ
ತುಪ್ಪದ ಚಕ್ಕುಲಿ ಸಕ್ಕರೆ ನೊರೆಹಾಲ ಸವಿಯೊ ಮನದಣಿಯೆ
ಜಗವ ತೊಟ್ಟಿಲ ಮಾಡಿ ಜೋಗುಳವಾಡುವೆ ಮಲಗೊ ಶ್ರೀಲೋಲ
ಕಣ್ತಣಿಯೆ ನಿನ್ನ ಕಂಡು ಧನ್ಯನಾಗುವೆ ಶ್ರೀನಿವಾಸ ವಿಠಲ (೨)

ಚೆಂಡುಬುಗುರಿ ಆಡೊ ಚೆಲುವ ಕೃಷ್ಣಯ್ಯ ಬಾರೊ ನಮ್ಮ ಮನೆಗೆ
ಗೋಪಿ-ನಂದನು ಕಂಡು ಕೋಪಗೊಳ್ಳರೆ ಕೃಷ್ಣ ಬಾರೊ ನಮ್ಮ ಮನೆಗೆ

                           ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೮.೦೯.೨೦೧೨

No comments:

Post a Comment