Tuesday, September 11, 2012

Shri Krishnana Nooraru Geethegalu - 287

ಒಲವ ಮಳೆಯ ಸುರಿಯೊ

ಒಲವ ಮಳೆಯ ಸುರಿಯೊ ಕೃಷ್ಣ ಹದವಿರದೀ ಎದೆಯೊಳು
ಕಣ್ಣ ತೆರೆದು ಬಯಕೆಬೀಜವು ನವೋಲ್ಲಾಸ ಹೊಳೆಯಲು

ಮೊದಲ ಬಸಿರು ಹೊಸತು ಹಗಲು ಚಿಗುರಿ ನಗಲಿ ಹಸಿರೆಲೆ
ಮರೆಯದಿರಲಿ ಬುವಿಯ ತಬ್ಬಿದ ತಾಯಬೇರಿನ ಹಿನ್ನೆಲೆ (೧)

ಕಾರಣವೇ ಇರದೆ ಯಮುನೆ ಹರಿಯುತಿಹಳೆ ಸುಮ್ಮನೆ
ಹರಿಯಬೇಕು ದಿನವು ಜಗವು ತಿಳಿಯಾಗಲು ಒಳಮನೆ (೨)

ಮೌನ ಮೂಡಣದೊಡಲಿನೊಳಗೆ ಮಧುರಮಾತಿನ ಕಿರಣವು
ಚಿಪ್ಪಿನೊಳಗಿನ ಮುತ್ತೆ ಅಂದವು ಇರಲಿ ಹಾಗೆಯೆ ಹೃದಯವು (೩)

ಇರಲಿ ಬೇಸಿಗೆ ಬಿಸಿಲು ಸಹಜವೇ ಸಂಜೆ ಸೋನೆಯ ಮಳೆಹನಿ
ಬೆಳಗೊಳಿರಿಸೊ ಶ್ರೀನಿವಾಸ ವಿಠಲ ಜೀವದಸಿರೊಳು ಇಬ್ಬನಿ (೪)

ಒಲವ ಮಳೆಯ ಸುರಿಯೊ ಕೃಷ್ಣ ಹದವಿರದೀ ಎದೆಯೊಳು
ಕಣ್ಣ ತೆರೆದು ಬಯಕೆಬೀಜವು ನವೋಲ್ಲಾಸ ಹೊಳೆಯಲು

                           ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೨.೦೯.೨೦೧೨

No comments:

Post a Comment