Monday, September 17, 2012

Shri Krishnana Nooraru Geethegalu - 293

ಚೆಲುವ ನಾಮದ ಕೃಷ್ಣನ

ಬಾರೆ ಗೆಳತಿ ತಾರೆ ಬಿಂದಿಗೆ ಯಮುನೆಯೆಡೆಗೆ ಪೋಗುವ
ನೀರ ತರುವ ನೆವದಿ ನಗುವ ಚೆಲುವ ಗೊಲ್ಲನ ನೋಡುವ

ಕಂಗಳಲೆ ಕವಿತೆ ಬರೆವನ ಕಿರುನಗೆಯೊಳು ಸನಿಹ ಕರೆವನ
ಮುರಳಿಯುಲಿದು ಮಧುರಗಾನವ ಎದೆಗೆ ಬರೆವನ
ನಿದ್ದೆಗೊಡದ ನೀಲವರ್ಣನ ಆಸೆಯಧರದೆ ಎನ್ನ ಕೊಲುವನ
ಗರಿಯ ಮುಡಿದು ಗಿರಿಯ ತಿರುಗೊ ಎನ್ನ ಕೃಷ್ಣನ (೧)

ಸೆರೆಯೂರನು ತೊರೆದನ ನೆರೆಗೋಕುಲ ಪೊರೆದನ
ದುಷ್ಟವುರಗದ ಹೆಡೆಯ ಮೆಟ್ಟಿ ವಿಶಿಷ್ಟ ನಾಟ್ಯವನಾಡ್ದನ
ಸಂಜೆ ಸುಂದರ ವೃಂದಾವನದಿ ರಾಧೆಯೊಲುಮೆಯ ಗೆಲುವನ
ಶ್ರೀನಿವಾಸ ವಿಠಲನೆಂಬೊ ಚೆಲುವ ನಾಮದ ಕೃಷ್ಣನ (೨)

ಬಾರೆ ಗೆಳತಿ ತಾರೆ ಬಿಂದಿಗೆ ಯಮುನೆಯೆಡೆಗೆ ಪೋಗುವ
ನೀರ ತರುವ ನೆವದಿ ನಗುವ ಚೆಲುವ ಗೊಲ್ಲನ ನೋಡುವ

                           ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೭.೦೯.೨೦೧೨

No comments:

Post a Comment