Wednesday, August 15, 2012

Shri Krishnana Nooraru Geethegalu - 271

ಕೊಳಲನೂದುತ ಬಂದ

ಕೊಳಲನೂದುತ ಬಂದ ರಾಧೆ ಸನಿಹಕೆ ಗೋವಿಂದ
ಉಲಿಯುತ ನಲುಮೆಯ ನವವಿಧರಾಗವ ಹೃದಯದೊಳು ನಿಂದ

ವೇದನೆ ವಿರಹದಾ ಅಂಬುಧಿ ಎದೆಯೊಳು ಪ್ರೀತಿ ಚಂದ್ರ ಬಿಂಬ
ಹೊರಗನು ನಲಿಸಿದ ಒಳಗನು ತಣಿಸಿದ ಧಾರೆ ಮೈಯ್ಯ ತುಂಬ (೧)

ಮೆದುವಿನ ಎದೆಮಣ್ಣು ಬೀಜದ ಕಣ್ಣು ಪ್ರೇಮದ ಸಿರಿಚಿಗುರು
ಒಲುಮೆಯ ಉಣಿಸಿದ ದಳದಳ ತೆರೆಸಿದ ಜೀವದ ಮೊದಲುಸಿರು (೨)

ಸಂಜೆಯ ಶ್ರಾವಣವು ಸುರಿಯುವ ನೆನಪಮಳೆ ಕಾಡುವ ಏಕಾಂತ
ಅಪ್ಪುಗೆ ಹೊದಿಸಿದ ತೋಳೊಳು ಬಳಸಿದ ಸುಖವದು ದಿಗಂತ (೩)

ಕಳೆಯದ ಸಂಜೆಯ ಕರಗದ ಇರುಳೊಳು ನಿರುತವು ಈ ಒಲವು
ಶ್ರೀನಿವಾಸ ವಿಠಲನ ಮಿಲನದಿ ರಾಧೆಯು ವೃಂದಾವನ ಚೆಲುವು (೪)

ಕೊಳಲನೂದುತ ಬಂದ ರಾಧೆ ಸನಿಹಕೆ ಗೋವಿಂದ
ಉಲಿಯುತ ನಲುಮೆಯ ನವವಿಧರಾಗವ ಹೃದಯದೊಳು ನಿಂದ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೫.೦೮.೨೦೧೨

No comments:

Post a Comment