Sunday, August 5, 2012

Shri Krishnana Nooraru Geethegalu - 263

ನಿಂದಿಹ ನೇಸರನು

ವೃಂದಾವನದ ಪಡುಜಗಲಿಯೊಳು ನಿಂದಿಹ ನೇಸರನು
ಬರುವನೆ ಕೆಂಪಿನ ಗಲ್ಲದ ರಾಧೆಯ ಸನಿಹಕೆ ಮೋಹನನು

ನಿನ್ನೆಯ ಸಂಜೆಯ ಸವಿಸವಿ ನೆನಪೊಳು ತೂಗಿದೆ ಉಯ್ಯಾಲೆ
ರಾಧೆಯ ಹೃದಯದ ವೀಣೆಯು ಕೃಷ್ಣಗೆ ಬರೆದಿದೆ ಕರೆಯೋಲೆ (೧)

ಬಯಕೆಯ ಪ್ರಣತಿಯ ದೀಪ್ತಿಯ ಕಾಂತಿಯು ರಾಧೆಯ ಕಂಗಳಲಿ
ಸುಂದರ ಚಂದಿರ ತಾರೆಯ ಜಾತ್ರೆಯು ಅವಳೆದೆಯೂರಿನಲಿ (೨)

ಬಿಡುಬಿಡುಯೆಂದರು ಬಿಡದೀ ಮುರಳಿಯ ಮೋಹವು ರಾಧೆಯನು
ವಿರಹದೊಳುರಿಸಿ ಮಿಲನದಿ ತಣಿಸಿ ಉಣಿಸಿದೆ ಪ್ರೀತಿಯನು (೩)

ರಾಧೆ-ಮಾಧವರ ಒಲುಮೆಯ ಯಮುನೆಯು ಹರಿದಿದೆ ಯುಗದಿಂದ
ಮರೆವನೆ ಶ್ರೀನಿವಾಸ ವಿಠಲನು ಅವಳ ಬರುವನು ಮುದದಿಂದ (೪)

ವೃಂದಾವನದ ಪಡುಜಗಲಿಯೊಳು ನಿಂದಿಹ ನೇಸರನು
ಬರುವನೆ ಕೆಂಪಿನ ಗಲ್ಲದ ರಾಧೆಯ ಸನಿಹಕೆ ಮೋಹನನು

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೫.೦೮.೨೦೧೨

No comments:

Post a Comment