Sunday, August 12, 2012

Shri Krishnana Nooraru Geethegalu - 269

ಏಕೊ ಕಾಡುತಲಿರುವೆ

ಏಕೊ ಕಾಡುತಲಿರುವೆ ಹೀಗೆ ನೆರಳಿನ ಹಾಗೆ
ನಗುತಿಹರೊ ಕಂಡವರು ಎನ್ನ ಕೃಷ್ಣ

ಎನ್ನ ಕೈಯ್ಯೊಳ ಕಡೆಗೋಲು ಜಾರುತಿದೆ
ನಿನ್ನ ಧ್ಯಾನದಿ ನನ್ನೇ ನಾನು ಮರೆತು
ಗೋಡೆಯೊಳಗಿನ ಚಿತ್ರ ನಗುತೆನೋ ಗುನುಗುತಿವೆ
ಮೈಮರೆತ ಈ ರಾಧೆಯನ್ನೆ ಕುರಿತು (೧)

ಎನ್ನೆದೆಯ ವೀಣೆಯದು ನಿನ್ನೆ ನಮ್ಮೀರ್ವರ
ಮಿಲನಗಾನದ ನೆನಪ ಮೀಟುತಿಹುದು
ಬೇಡುವೆನು ಕಡೆಗೋಲೆ ನೀಡೆ ಬೆಣ್ಣೆಯ ಮುದ್ದೆ
ಎನ್ನ ಜೀವವದಲ್ಲಿ ಕಾಯುತಿಹುದು (೨)

ಗೋಕುಲದ ಗಾಳಿಯೊಳು ಗಾನವಾಗಿದೆ ಕೃಷ್ಣ
ಎಮ್ಮ ಒಲವಿನ ಪ್ರೇಮ ಸಲ್ಲಾಪವು
ಹೀಗೆನ್ನ ಕಾಡುತಿರೆ ಶ್ರೀನಿವಾಸ ವಿಠಲ ನೀ
ತುಂಟ ಕೃಷ್ಣ ಎನದೆ ಈ ಲೋಕವು (೩)

ಏಕೊ ಕಾಡುತಲಿರುವೆ ಹೀಗೆ ನೆರಳಿನ ಹಾಗೆ
ನಗುತಿಹರೊ ಕಂಡವರು ಎನ್ನ ಕೃಷ್ಣ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೨.೦೮.೨೦೧೨

No comments:

Post a Comment