Thursday, August 2, 2012

Shri Krishnana Nooraru Geethegalu - 260

ನಿನ್ನೊಲವ ಬೃಂದಾವನ

ನಿನ್ನ ಸನಿಹದ ಸುಖಕೆ ಕಾತರಿಸುತಿಹೆ ಕೃಷ್ಣ
ಎನ್ನಂತೆ ನಿನ್ನೊಲವ ಬೃಂದಾವನ

ಢವಢವಿಸುವೀ ಎದೆಯು ಕೇಳಿಸದೆ ಮದನಪಿತ
ಮೊದಲ ಅಪ್ಪುಗೆ ಭಯವು ಮೃದುಕಂಪನ
ಬಿಸಿಲ ಬುವಿಯೊ ನಾನು ಸುರಿದು ಬಾರೊ ನೀನು
ಎಮ್ಮ ಮಿಲನದ ಹೆಸರೆ ರೋಮಾಂಚನ (೧)

ಕಾದಿಹೆನು ಬೇಡುವೆನು ನಿನ್ನ ರಾಧೆಯೊ ನಾನು
ಎನ್ನ ಹೃದಯದ ಮೊರೆಯ ನೀ ಕೇಳೆಯ
ಮಳೆಯಾಗಿ ಭೋರ್ಗರೆಯೊ ಎನ್ನ ಪ್ರೀತಿಗೆ ತುಡಿಯೊ
ತಣಿಸು ಸುಡುವೆನ್ನ ವಿರಹಾಗ್ನಿ ಇಳೆಯ (೨)

ಯುಗಯುಗದ ಪ್ರೇಮವದು ಎಮ್ಮದೈ ಮೋಹನ
ಒಲುಮೆ ನಲುಮೆಯ ಚಿಲುಮೆ ಹರಿವ ಯಮುನೆ
ತ್ರೇತೆಯರಸನೆ ರಾಮ ಜಾನಕಿಯೊ ನಾ ನಿನ್ನ
ಕಲಿಯ ಲಕುಮಿಯೊ ಮುಂದೆ ಶ್ರೀನಿವಾಸ ವಿಠಲನೆ (೩)

ನಿನ್ನ ಸನಿಹದ ಸುಖಕೆ ಕಾತರಿಸುತಿಹೆ ಕೃಷ್ಣ
ಎನ್ನಂತೆ ನಿನ್ನೊಲವ ಬೃಂದಾವನ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೨.೦೭.೨೦೧೨

No comments:

Post a Comment