Monday, August 20, 2012

Shri Krishnana Nooraru Geethegalu - 273

ಇಳಿಸಂಜೆಯೊಡಲಿನಲಿ

ಇಳಿಸಂಜೆಯೊಡಲಿನಲಿ ನಾನೊಬ್ಬಳೇ ಇಲ್ಲಿ
ಎನ್ನ ಪ್ರೇಮದ ಅರಸ ಬರುವನೇನೆ...ಸಖಿ

ಯಮುನೆಯ ತೀರದಲಿ ಅವನ ಎದೆಯೊರಗಿನಲಿ
ಮಧುರ ಮುರಳಿಯ ಗಾನ ಕೇಳಬೇಕು
ನಾಚುತಿಹ ಕೆಂಮೊಗದ ಚಂದಿರನ ತಾರೆಯರ
ಅವನೊಲುಮೆ ಆಗಸದಿ ನೋಡಬೇಕು (೧)

ಸರಸದ ಸರಿಗಮವ ನುಡಿಸೆನ್ನ ಮೈಮನದಿ
ವೀಣೆಯಂದದಿ ಕೃಷ್ಣ ಎನ್ನಬೇಕು
ವಿರಹದ ಕಣಕಣವು ತಣಿದವನ ಮಿಲನದೊಳು
ಜೀವದುಸಿರದು ಅವನ ಸೇರಬೇಕು (೨)

ಎನ್ನ ತೋಳೊಳು ಬಳಸಿ ಗಲ್ಲಕಧರವನಿರಿಸಿ
ನಯನದೊಳು ನುಡಿದನೇ ಬೇಗ ಬರುವೆನೆಂದು
ಎನ್ನೊಡೆಯ ಗೋಕುಲದ ಶ್ರೀನಿವಾಸ ವಿಠಲನೇ
ಮಲ್ಲಿಗೆಯ ಮುಡಿಗಿಡಲು ತರುವೆನೆಂದು (೩)

ಇಳಿಸಂಜೆಯೊಡಲಿನಲಿ ನಾನೊಬ್ಬಳೇ ಇಲ್ಲಿ
ಎನ್ನ ಪ್ರೇಮದ ಅರಸ ಬರುವನೇನೆ...ಸಖಿ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೦.೦೮.೨೦೧೨

No comments:

Post a Comment