Thursday, August 16, 2012

Shri Krishnana Nooraru Geethegalu - 271

ರಾಮನಾಮ ನುಡಿಯದವಗೆ

ಪಾಪ ಕಳೆವುದೆ ನಿನ್ನ ಪುಣ್ಯ ಬೆಳೆವುದೆ
ರಾಮನಾಮವ ನುಡಿಯದವಗೆ ಮುಕುತಿ ದೊರೆವುದೆ ಇಹದಿ

ಹಲವು ಆಲಯ ಅಲೆದರೇನು ಹರಕೆಕಾಯನು ಹೊಡೆಯಲೇನು
ಅನ್ಯದ್ರವ್ಯವ ದಾನವೆರೆದು ಧನ್ಯನೆಂದು ಮೆರೆದರೇನು (೧)

ಹಲವು ಗಿರಿಗಳ ಸುತ್ತಲೇನು ಹಣೆಗೆ ಮೃತಿಕೆಯ ಮೆತ್ತಲೇನು
ಮನದ ಕ್ಲೇಶವ ತೊಳೆಯದೇಳು ಪುಣ್ಯಜಲದಿ ಮುಳುಗಲೇನು (೨)

ತ್ರೇತೆ ಕಥೆಯ ಹಾಡಲೇನು ಸೀತೆ ವ್ಯಥೆಯ ಪಾಡಲೇನು
ಧರ್ಮದಾದಿ ಅರಿಯದವಗೆ ಅವನ ಚರಣ ದೊರೆವುದೇನು (೩)

ಹಲವು ದೈವವ ಭಜಿಸಲೇನು ಅವನೀಶನ ಮರೆವುದೇನು
ಶ್ರೀನಿವಾಸ ವಿಠಲನೆನಲು ಎಮ್ಮ ಕರ್ಮ ಕಳೆಯನೇನು (೪)

ಪಾಪ ಕಳೆವುದೆ ನಿನ್ನ ಪುಣ್ಯ ಬೆಳೆವುದೆ
ರಾಮನಾಮವ ನುಡಿಯದವಗೆ ಮುಕುತಿ ದೊರೆವುದೆ ಇಹದಿ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೬.೦೮.೨೦೧೨

No comments:

Post a Comment