Saturday, May 14, 2011

Shri Krishnana Nooraru Geethegalu - 103

ನಿನ್ನ ನಾಮ ಭಜಿಸೆ

ನಿನ್ನ ನಾಮವ ಭಜಿಸೆ ಜನುಮ ಪಾವನವಂತೆ
ನೆಚ್ಚಿದಾ ದೀನರನು ಹರಿಯೆ ನೀ ಕಾವೆಯಂತೆ

ಅರಿಯೆನೊ ತ್ರೇತೆಯೊಳು ದಶರಥನ ಸುತನಾಗಿ
ಧರಣಿಯೊಳು ಧರ್ಮವನು ನೀ ಕಾಯ್ದೆಯಂತೆ
ಬಕುತ ಹನುಮನಿಗೊಲಿದ ಜಾನಕೀಪ್ರಿಯನಂತೆ
ಅಸುರನನುಜನನ ಮೆಚ್ಚಿ ಪಟ್ಟಗಟ್ಟಿದೆಯಂತೆ (೧)

ಅರಿಯೆನೊ ದ್ವಾಪರದೆ ವಸುದೇವ ಸುತನಾಗಿ
ಗೋಕುಲದ ಸುಜನರನು ನೀ ಪೊರೆದೆಯಂತೆ
ಧರ್ಮದೈವರಿಗೊಲಿದ ಕುರುದುರಿತಹರನಂತೆ
ಕಾಡ ಕಾಂಡವ ನುಡಿಸೊ ಕುಚೇಲಪ್ರಿಯನಂತೆ (೨)

ಅರಿಯೆನೊ ಕಲಿಯೊಳಗೆ ಭಕ್ತವತ್ಸಲನಾಗಿ
ಶರಣಂಗೆ ಸುಖಕೊಡುವ ಲಕುಮಿಪತಿಯಂತೆ
ಸ್ತುತಿಪ ದಾಸರಿಗೊಲಿದ ಭವರೋಗಹರನಂತೆ
ಶ್ರೀನಿವಾಸ ವಿಠಲ ನೀ ವೈಕುಂಠಪತಿಯಂತೆ (೩)

ನಿನ್ನ ನಾಮವ ಭಜಿಸೆ ಜನುಮ ಪಾವನವಂತೆ
ನೆಚ್ಚಿದಾ ದೀನರನು ಹರಿಯೆ ನೀ ಕಾವೆಯಂತೆ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೧೪.೦೫.೨೦೧೧

No comments:

Post a Comment