Friday, May 27, 2011

Shri Krishnana Nooraru Geethegalu - 118

ನೀನಲ್ಲವೇ ಕೃಷ್ಣ

ಏನ ಕೇಳಲೊ ಹರಿಯೆ ಎಲ್ಲವೂ ನಿನ್ನದೇ
ಎನ್ನ ಕರೆತಂದವನೂ ನೀನಲ್ಲವೇ ಕೃಷ್ಣ

ಅಣುವಿನೀ ದೇಹದೊಳು ಗುಣಾವಗುಣ ಗೊಂಬೆ
ಆಡಿಸುವ ಸೂತ್ರಕನು ನೀನಲ್ಲವೆ
ಮತ್ತಾರು ಮತ್ತರನು ಅಂಕೆಯಿಲ್ಲದೆ ಬಿಟ್ಟು
ಮಾಯೆಯಾಟದೊಳಿಹನು ನೀನಲ್ಲವೆ (೧)

ತಲೆಗುಣಿಸಿದರಸರು ಧರೆಯಾಳುವೆವೆಂದು
ಆರ್ಭಟಿಸೆ ನಕ್ಕವನು ನೀನಲ್ಲವೆ
ತೊಡೆಮುರಿದ ಕೌರವನು ದೈನ್ಯನಾಗಿರಲಾಗ
ಧರ್ಮವನು ಗೆಲಿಸಿದನು ನೀನಲ್ಲವೆ (೨)

ಪಂಚಭೂತಾಬ್ಧಿಯ ಸ್ಥಿತಿಗತಿಲಯದೊಳಗೆ
ಬಹಿರಾಂತರ ಶಕ್ತಿ ನೀನಲ್ಲವೆ
ನೀನೆನ್ನ ಗತಿಯೆನಲು ಬಿಡದೇ ಸಲಹುವ ದೊರೆಯೆ
ಶ್ರೀನಿವಾಸ ವಿಠಲನು ನೀನಲ್ಲವೆ (೩)

ಏನ ಕೇಳಲೊ ಹರಿಯೆ ಎಲ್ಲವೂ ನಿನ್ನದೇ
ಎನ್ನ ಕರೆತಂದವನೂ ನೀನಲ್ಲವೇ ಕೃಷ್ಣ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೨೭.೦೫.೨೦೧೧

No comments:

Post a Comment