Monday, May 2, 2011

Shri Krishnana Nooraru Geethegalu - 091

ಬೇಡವೊ ನಿನ್ನ ಸಂಗ

ಬೇಡಯ್ಯ ಬೇಡ ರಂಗ ಬೇಡವೊ ನಿನ್ನ ಸಂಗ
ನೀನೆಮ್ಮವನೆನಲು ಅಭಿಮಾನ ಭಂಗ

ಸೆರೆಯೊಳು ಜನಿಸಿದನೆ ಮಾಯದಿ ನೆಲೆಸಿದನೆ
ನವನೀತಚೋರನೆಂ ಗೋಪಕುಲ ದೂರುವನೆ
ಪುಂಡಪೋರರ ಕೂಡಿ ಕಂಡೋರ ಮನೆಸೇರಿ
ಕೆನೆಹಾಲುಮೊಸರ ಮೆದ್ದೆದ್ದು ಓಡುವನೆ (೧)

ಕಾಡುಹೂಗಳನಾಯ್ದು ವನಮಾಲೆ ಧರಿಸುವನೆ
ಬಿದಿರಕಾಂಡದ ಕೊಳಲ ರಾಗವ ಪಾಡುವನೆ
ಸಿಕ್ಕ ಬಿಕ್ಕೆಯ ಹಣ್ಣು ಜೇನ್ಹಿಂಡಿ ಉಣುವವನೆ
ಗೋಕುಲದ ದನಗಾಹಿ ಗೋಪಾಲ ಗೊಲ್ಲನೆ (೨)

ನಿತ್ಯವಸುರರ ಮಡುಹಿ ರಕುತ ಚೆಲ್ಲಾಡುವನೆ
ಮಾತೆಯೆಂ ಪೂತನೆ ವಿಷಮೊಲೆಯನುಣುವನೆ
ಆವುದೊ ಮಾಯದೊಳು ಗೋವರ್ಧನವೆತ್ತಿದನೆ
ಅಣುರೇಣು ನೀನೆನುವ ಶ್ರೀನಿವಾಸ ವಿಠಲನೆ (೩)

ಬೇಡಯ್ಯ ಬೇಡ ರಂಗ ಬೇಡವೊ ನಿನ್ನ ಸಂಗ
ನೀನೆಮ್ಮವನೆನಲು ಅಭಿಮಾನ ಭಂಗ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೨.೦೫.೨೦೧೧

No comments:

Post a Comment