Wednesday, May 4, 2011

Shri Krishnana Nooraru Geethegalu - 093

ಕೊಳಲಾಗಿಸೊ ಕೃಷ್ಣ

ಕೊಳಲಾಗಿಸೊ ಕೃಷ್ಣ ನಿನ್ನ ಕೈಯೊಳು ಎನ್ನ
ನುಡಿಸು ನಿಲಿಸದೆ ಹರಿಯೆ ಜೀವನಾದ

ಕಾಡ ಕಾಂಡದ ಕೊಳವೆ ನಿರ್ಜೀವ ನಾನಯ್ಯ
ಒದಗೊ ಎನ್ನೊಲವ ಜೀವಸಂಗೀತ
ಉಣಿಸೊ ರಾಗದ ಸುಧೆಯ ಸಪ್ತಸರಿಗಮದಲ್ಲಿ
ಹರಿಸಿ ಜೀವದವುಸಿರ ಪ್ರೇಮನಾಥ (೧)

ನುಡಿಸಿದೊಳು ನೀನೆನ್ನ ನಲಿವೆನೊ ಕೃಷ್ಣಯ್ಯ
ನಿನ್ನಧರ ದಡೆ ಮೀರಿ ನಾದಯಮುನೆ
ತಣಿಸೊ ವಿರಹಿರಾಧೆ ಕಾದು ಗೋಕುಲದಲ್ಲಿ
ನಿನ್ನ ಮೋಹದ ಕರೆಗೆ ಒಂದೆ ಸಮನೆ (೨)

ನಿನ್ನ ಸನಿಹದೊಳಿರುವ ಮಹದಾಸೆ ಎನದಯ್ಯ
ಎನ್ನಗಲಿ ಪೋಗದಿರೊ ದೇವದೇವ
ಕೊನರದ ಕೊರಡಿನ ಕೊಳಲೆಂದು ಬಿಸುಡದಿರೊ
ಶ್ರೀನಿವಾಸ ವಿಠಲನೆ ಎನ್ನ ಜೀವ (೩)

ಕೊಳಲಾಗಿಸೊ ಕೃಷ್ಣ ನಿನ್ನ ಕೈಯೊಳು ಎನ್ನ
ನುಡಿಸು ನಿಲಿಸದೆ ಹರಿಯೆ ಜೀವನಾದ

ರಚನೆ:- ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೪.೦೫.೨೦೧೧

No comments:

Post a Comment